ಅಕ್ಟೋಬರ್ ೨೮, ೨೦೦೯ “ವಿಶ್ವ ನಸುಗೆಂಪು ಹಿಜಾಬ್” ದಿನ (pink hijab day). ಈ ದಿನದ ಉದ್ದೇಶ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುವುದಾಗಿದೆ. ವಿಶ್ವದ ಹಿಜಾಬ್ ( ಮುಸ್ಲಿಂ ಸಾಂಸ್ಕೃತಿಕ ಉಡುಗೆ ) ಧರಿಸುವ ಮುಸ್ಲಿಂ ಹೆಣ್ಣುಮಕ್ಕಳ ನೇತೃತ್ವದಲ್ಲಿ ಈ ದಿನ ಆಚರಿಸಲಾಗುತ್ತಿದೆ. ಈ ದಿನ ವಿಶ್ವದ ಮುಸ್ಲಿಂ ಹೆಣ್ಣುಮಕ್ಕಳು ನಸುಗೆಂಪು ಬಣ್ಣದ ಹಿಜಾಬ್ ಧರಿಸಿ ಸ್ತ್ರೀಯರನ್ನು ಭಯಾನಕವಾಗಿ ಕಾಡುತ್ತಿರುವ ಸ್ತನ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸಿ ಚಂದಾ ಸಂಗ್ರಹಣೆ ಮಾಡಿ ಕ್ಯಾನ್ಸರ್ ಸಂಘಟನೆಗಳಿಗೆ ಕೊಡುವುದರ ಜೊತೆ ಮುಸ್ಲಿಂ ಹೆಣ್ಣುಮಕ್ಕಳ ಮತ್ತು ಸ್ತ್ರೀಯರ ಬಗೆಗಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವತ್ತ ಪ್ರಯತ್ನ ಮಾಡಲಿದ್ದಾರೆ.
ಹಿಜಾಬ್ ಕಂಡ ಕ್ಷಣ ಈಕೆಯೆಲ್ಲೋ ಶೋಷಣೆಗೆ ಒಳಪಟ್ಟ, ಮುಲ್ಲಾಗಳ ನಿಯಂತ್ರಣದಲ್ಲಿರುವ, ನಿರಕ್ಷರಕುಕ್ಷಿ ಆಗಿರಬಹುದು ಎನ್ನುವ ಅಭಿಪ್ರಾಯ ಹಲವರಲ್ಲಿದೆ. ಹಿಜಾಬ್ ಧರಿಸಿ ಉನ್ನತ ವ್ಯಾಸಂಗ ಪಡೆದು ಯಶಸ್ವಿಗಳಾದ ಮುಸ್ಲಿಮ ಮಹಿಳೆಯರು ಅಸಂಖ್ಯ. ಬಾಹ್ಯ ಸೌಂದರ್ಯವನ್ನು ಪ್ರದರ್ಶಿಸಿ ಅಂತರಂಗದ ಸೌಂದರ್ಯವನ್ನು ಕಳೆಯಲು ಇಚ್ಛಿಸದ ಮುಸ್ಲಿಂ ಮಹಿಳೆ ಯಾವುದೇ ಭಯವಿಲ್ಲದೆ ಹಿಜಾಬ್ ಧರಿಸುತ್ತಾಳೆ. modernity ಹೆಸರಿನಲ್ಲಿ ಹೆಣ್ಣು ಕನಿಷ್ಠ ವಸ್ತ್ರ ಧರಿಸಲು ಉತ್ತೇಜಿಸುವ ಮುಂದುವರಿದ ರಾಷ್ಟ್ರಗಳಲ್ಲೂ ಮುಸ್ಲಿಂ ಮಹಿಳೆಗೆ ಹಿಜಾಬ್ ಹಿನ್ನಡೆಯಾಗಿಯೋ, ತೊಡಕಾಗಿಯೋ ಕಂಡಿಲ್ಲ. ಸ್ವ ಇಷ್ಟದಿಂದ ಮತ್ತು ಸ್ವಾಭಿಮಾನದಿಂದ ಆಕೆ ತನ್ನ ಸೃಷ್ಟಿಕರ್ತನ ನಿರ್ದೇಶಗಳನ್ನು ಪಾಲಿಸುತ್ತಾಳೆ ಮತ್ತು ತನ್ನ ಹೆಣ್ತನವನ್ನು ಮೆರೆಯುತ್ತಿದ್ದಾಳೆ.
“ರಾಮ ಮಂದಿರದ ಬಗ್ಗೆ ಮುಸ್ಲಿಮರು ಹಿಂದೂಗಳ ಭಾವನೆಗಳನ್ನು ಗೌರವಿಸಬೇಕು” ಎಂದು ದ್ವಾರಕ ಪೀಠದ ಶಂಕರಾಚಾರ್ಯ ಶ್ರೀ ಸ್ವಾಮಿ ಸ್ವರೂಪಾನಂದ ಸರಸ್ವತಿ ಎಂದು ಮನವಿ ಮಾಡಿಕೊಂಡಿದ್ದಾರೆ ಎಂದು times of india ದಲ್ಲಿ ಸುದ್ದಿ. ಖಂಡಿತ. ವಿವಿಧ ಧರ್ಮಗಳ ಜನ ಬದುಕುತ್ತಿರುವ ಭಾರತದಲ್ಲಿ ಎಲ್ಲರೂ ಧರ್ಮ ಸಹಿಷ್ಣುತೆಯನ್ನು ಮೆರೆಯಬೇಕು. ಅಯೋಧ್ಯೆಯ ವಿವಾದವನ್ನು ಎಲ್ಲರೂ ಕುಳಿತು ದ್ವೇಷದ ಮನಸ್ಥಿತಿ ಬಿಟ್ಟು ಮಾತನಾಡಿದರೆ ಖಂಡಿತ ಅದಕ್ಕೆ ಪರಿಹಾರ ಸಿಗುವ ಸಾಧ್ಯತೆ ಇದೆ. “ಕ್ರೈಸ್ತರಿಗೆ ವ್ಯಾಟಿಕನ್ ಮತ್ತು ಮುಸ್ಲಿಮರಿಗೆ ಪವಿತ್ರ ಮಕ್ಕ ಇರುವಂತೆ ಹಿಂದೂಗಳಿಗೆ ರಾಮ ಜನ್ಮ ಭೂಮಿ ಪವಿತ್ರವಾದುದು” ಎಂದು ಸ್ವಾಮೀಜಿ ಹೇಳಿದರು. ಈ ಸಮಸ್ಯೆಯನ್ನು ಶಾಂತಿಯುತವಾಗಿ ಬಗೆಹರಿಯಬೇಕು ಎಂದೂ ಅವರು ಒತ್ತಿ ಹೇಳಿದರು. ಆದರೆ ರಾಜಕಾರಣಿಗಳ ಕೈಯಲ್ಲಿ ಯಾವುದಾದರೂ ಸಮಸ್ಯೆ ನೀತಿಯುತವಾಗಿ, ಶಾಂತಿಯುತವಾಗಿ ಪರಿಹಾರವಾಗಿದ್ದಿದೆಯೇ? ಮುಸ್ಲಿಮರ ಮನ ಗೆದ್ದು ಮಂದಿರ ಕಟ್ಟುವ ಬದಲು ಕೆಲವು ಸಂಘಟನೆಗಳು ಮನಸ್ಸನ್ನು ಒಡೆಯುವ ಕೆಲಸ ಸೊಗಸಾಗಿ ಮಾಡಿದವು. ಸಾಕಷ್ಟು ರಕ್ತಪಾತವನ್ನೂ ಹರಿಸಿದವು. ಶತಮಾನಗಳಿಂದ ಶಾಂತವಾಗಿ ಬದುಕುತ್ತಿದ್ದ ಜನರ ನಡುವೆ ಹಗೆತನದ ಗೋಡೆ ಕಟ್ಟಿ ನಿಲ್ಲಿಸಿದವು. ಪೂರ್ವ ಪಶಿಮ ಜರ್ಮನಿಗಳ ನಡುವೆ ನಿಂತಿದ್ದ ಬರ್ಲಿನ್ ಗೋಡೆ ಜನರ ಪ್ರೀತಿ, ಒಟ್ಟಿಗೆ ಬಾಳುವ ಅದಮ್ಯ ಆಸೆಯ ಮುಂದೆ ನೆಲ ಕಚ್ಚಿತು. ಆದರೆ ಹಿಂದೂ ಮುಸ್ಲಿಮರ ನಡುವಿನ ದ್ವೇಷದ ಗೋಡೆ? ಆ ಗೋಡೆ ಕರಗಳು ಸಂಘಟನೆಗಳು ಮಾತ್ರವಲ್ ಮಾಧ್ಯಮಗಳೂ ಬಿಡುತ್ತಿಲ್ಲ.