ಇನ್ನಾದರೂ ಜೀವನದಲ್ಲಿ ಹಿಂದೆ ಬನ್ನಿ..

ಇನ್ನಾದರೂ ಜೀವನದಲ್ಲಿ ಹಿಂದೆ ಬನ್ನಿ ಹಾಡಿನಲ್ಲಿ ಮುಂದೆ ಬರುವ ಹುರುಪು ಇರಬಹುದು ಆದರೆ ನಿಜ ಜೀವನದಲ್ಲಿ ಕೆಲವೊಮ್ಮೆ ಹಿಂದೆ ಹೋಗುವ ಅವಶ್ಯಕತೆ ಬರುತ್ತದೆ. ಆಂಗ್ಲ ಭಾಷೆಯಲ್ಲಿ back to basics ಎನ್ನುತ್ತಾರೆ. ನೈತಿಕವಾಗಿ ಅಧಃಪತನದ ಹಾದಿ ಹಿಡಿದಾಗ ಹೇಳುವುದಿದೆ ಕಾಲ ಕೆಟ್ಟು ಹೋಯಿತು, now is time to look back ಅಂತ. ಕಾಲ ಎಂದಿಗೂ ಕೆಡುವುದಿಲ್ಲ, ಕಾಲವನ್ನು ಕೆಡಿಸುವವರು ನಾವು. ಇಷ್ಟೆಲ್ಲಾ ಹೇಳಲು ಕಾರಣ ಆಧುನಿಕ ಬದುಕಿನ ನೂರಾರು ಆವಿಷ್ಕಾರಗಳಲ್ಲಿ ಒಂದಾದ ಪ್ಲಾಸ್ಟಿಕ್ ಹೇಗೆ ನಮ್ಮ ಭೂಮಿಯ ಮೇಲಿನ ಬದುಕನ್ನು ದುಸ್ತರಗೊಳಿಸುತ್ತದೆ ಮತ್ತು ಅದನ್ನು ನಿಗ್ರಹಿಸಲು ನಾವೆಷ್ಟು ಶ್ರಮ ಪಡುತ್ತಿದ್ದೇವೆ ಎನ್ನುವುದರತ್ತ ಒಂದು ನೋಟ ಹರಿಸೋಣ. ಮಾರುಕಟ್ಟೆಗೆ ಕರಿಬೇವು ತರಲು ಹೋದರೆ ಕೂಡಲೇ ಅದನ್ನು ಪ್ಲಾಸ್ಟಿಕ್ ಚೀಲದಲ್ಲಿ ಹಾಕಿ ಕೊಡುತ್ತಾನೆ ಅಂಗಡಿಯವ. ಕಾಲವೊಂದಿತ್ತು ಬಟ್ಟೆ ಚೀಲವನ್ನು ಶಾಪಿಂಗ್ ವೇಳೆ ಕೊಂಡುಹೋಗುವುದು. ಈಗ ಅದು outdated ಮತ್ತು out of sync. ಕಾಲದೊಂದಿಗೆ ಹೆಜ್ಜೆ ಹಾಕಲು ಬರದವ ಎಂದು ಕನಿಕರದ ನೋಟ ಎದುರಾಗುತ್ತದೆ. ಪ್ಲಾಸ್ಟಿಕ್ ಅಥವಾ ಪಾಲಿಥಿನ್ ಚೀಲದ ಉಪಯೋಗದಿಂದ ಆಗುವ ಅನಾಹುತ ಕೇಳಿಯೇ ಇದ್ದೇವೆ. ಕೆಲ ವರ್ಷಗಳ ಹಿಂದೆ ಮುಂಬೈ ಮಹಾ ನಗರದ ಚರಂಡಿಗಳು ಪಾಲಿಥಿನ್ ಚೀಲಗಳಿಂದ ತುಂಬಿ ಮಳೆ ನೀರು ಹರಿದು ಹೋಗಲು ಸ್ಥಳ ಇಲ್ಲದೆ ಪ್ರವಾಹದ ಪರಿಸ್ಥಿತಿ ನಿರ್ಮಿತವಾಗಿತ್ತು. ಇಂಥ ಘಟನೆಗಳಿಂದ ಬುದ್ಧಿ ಕಲಿಯುವ ಇರಾದೆ ಮತ್ತು ಸಮಯ ನಮಗಿಲ್ಲದಿದ್ದರೂ ಪಕ್ಕದ ಚೀನಾ ದೇಶ ಮಾತ್ರ ದೊಡ್ಡ ಅನಾಹುತ ಎರಗುವ ಮೊದಲೇ ಎಚ್ಚತ್ತುಕೊಳ್ಳುವ ಸಿದ್ಧತೆ ಮಾಡಿದೆ. ಆರ್ಥಿಕವಾಗಿ ಅತಿ ವೇಗವಾಗಿ ಬೆಳೆಯುತ್ತಿರುವ ಚೀನಾ ನಿಸರ್ಗಕ್ಕೆ ಮಾಡಿದ ಅನ್ಯಾಯದ ಅರಿವು ತಡವಾಗಿಯಾದರೂ ಬಂದಿತು. ಪ್ರತಿ ದಿನ ೩ ಕೋಟಿ ಚೀಲಗಳನ್ನು ಬಳಸುವ ಚೀನಾ ಇಂಥ ಚೀಲಗಳ ಉತ್ಪಾದನೆಗೆ ಬಹಳಷ್ಟು ಸಂಪನ್ಮೂಲಗಳನ್ನು ಉಪಯೋಗಿಸಬೇಕಿತ್ತು. ಅಮೇರಿಕಾ ಈ ಪ್ರಮಾಣದ ( ೩ ಕೋಟಿ ) ಚೀಲ ಬಳಸಲು ಒಂದು ವರ್ಷ ತೆಗೆದುಕೊಳ್ಳುತ್ತದೆ. ಚೀನಾ ಈಗ ಪಾಲಿಥಿನ್ ಚೀಲದ ಮೇಲೆ ನಿರ್ಬಂಧ ಹೇರಿದ್ದು ಸಾರ್ವಜನಿಕ ಅಭಿಯಾನದ ಮೂಲಕ ಜನರಲ್ಲಿ ಅರಿವು ಮೂಡಿಸುತ್ತಿದೆ. ಈ ವಿಷಯದಲ್ಲಿ ನಾವೇಕೆ ಹಿಂದೆ ಬೀಳಬೇಕು? ಇನ್ನು ಮುಂದೆ ಸಾಮಾನು ಕೊಳ್ಳಲು ಹೋಗುವಾಗ ಬಟ್ಟೆ ಚೀಲವನ್ನು ಏಕೆ ಉಪಯೋಗಿಸಬಾರದು. ನಾವು ಮಾತ್ರವಲ್ಲ, ಮನೆಯವರಿಗೂ, ನೆಂಟರಿಷ್ಟರಿಗೂ ಸ್ನೇಹಿತರಿಗೂ ಇದರ ಬಗ್ಗೆ ತಿಳಿ ಹೇಳಿ ಒಂದು ಪುಟ್ಟ ಅಭಿಯಾನ ಆರಂಬಿಸಿದರೆ ಹೇಗೆ? every great journey starts with one small step, ಅಲ್ಲವೇ?

ನಿಮ್ಮ ಟಿಪ್ಪಣಿ ಬರೆಯಿರಿ