” ವಿದ್ಯುಚ್ಛಕ್ತಿ ತಡೆಯಿಲ್ಲದೆ ಸರಬರಾಜಿದ್ದರೆ ಜನ ತಡ ರಾತ್ರಿವರೆಗೂ ಟೀ ವೀ ನೋಡಿ ಮಲಗಿಬಿಡುವುದರಿಂದ ಮಕ್ಕಳನ್ನು ಉತ್ಪಾದಿಸಲು ಅವಕಾಶ ಸಿಗದು ಎಂದು ನಮ್ಮ ಸನ್ಮಾನ್ಯ ಕೇಂದ್ರ ಆರೋಗ್ಯ ಮಂತ್ರಿ ಗುಲಾಂ ನಬಿ ಆಜಾದ್ ಭಾರತದ ಜನ ಸಂಖ್ಯೆ ತಡೆಯಲು ತಮ್ಮದೇ ಆದ ಸುವರ್ಣ ಸೂತ್ರ ಬೋಧಿಸಿದರು. ಇದು ಎಷ್ಟು ಯಶಸ್ವಿ ಸೂತ್ರವೋ ಏನೋ ಕಾಲವೇ ಹೇಳಬೇಕು.
ನನ್ನ ಪ್ರಕಾರ ಜನಸಂಖ್ಯೆ ವೃಧ್ಧಿಗೂ ಮನೋರಂಜನೆಗೂ ಯಾವುದೇ ಸಂಬಂಧವಿಲ್ಲ. ಲೈಂಗಿಕ ಕ್ರಿಯೆ ನಡೆಸುವವನಿಗೆ ಕರೆಂಟ್ ಇದ್ದರೂ ಬಿಟ್ಟರೂ ಕಾಮ ಕೇಳಿಗೆ ಯಾವ ಅಡಚಣೆಯೂ ಬರದು. ಉದಾಹರಣೆಗೆ ಒಬ್ಬ ಶ್ರಮಜೀವಿ ತನ್ನ ಕೆಲಸ ಮುಗಿಸಿ ದಣಿದು ಮನೆಗೆ ಬಂದಾಗ ಅವನಿಗೆ ಬೇಕಿದ್ದರೆ ಲೈಂಗಿಕ ಕ್ರಿಯೆ ನಡೆಸಿಯೇ ತೀರುತ್ತಾನೆ. ಇನ್ನು ಅವನಿಗೆ ಪೂರಕ ಮನೋರಂಜನೆಯನ್ನು ಕೊಟ್ಟು ನೋಡಿ. ಕೆಲಸ ಮುಗಿಸಿ ದಣಿದು ಬಂದು ಒಂದಿಷ್ಟು ವಿಶ್ರಮಿಸಿ ಟೀವೀ ನೋಡುತ್ತಾನೆ. ಟೀವೀಯಲ್ಲಿ ತೋರಿಸುವುದಾದರೂ ಏನನ್ನು? ಬಿಪಾಶಾಳ ಮೈಮಾಟವನ್ನೂ, ನಿಹಾ ಧುಪಿಯಾಳ ಅಂಗಸೌಷ್ಟವವನ್ನೂ ಅಲ್ಲವೇ? ಇದನ್ನು ನೋಡಿದ ನಮ್ಮ ಉಪ್ಪು ಹುಳಿ ತಿಂದ ಶ್ರಮ ಜೀವಿ ಇನ್ನ್ನಷ್ಟು ಉದ್ರೇಕಗೊಂಡು ರತಿ ಕ್ರೀಡೆಯಲ್ಲಿ ತೊಡಗಿಸಿಕೊಳ್ಳದೆ ಇರುತ್ತಾನೆಯೇ? ಎಲ್ಲಾ ರೀತಿಯ ಮನೋರಂಜನೆಯನ್ನು ನೀಡಿದ ಮತ್ತು ಪಡೆದ ಮಾಜಿ ಮಂತ್ರಿ ಮಹೋದಯರಾದ ಲಾಲೂ ಪ್ರಸಾದ್ ಅವರಿಗೆ ಎಷ್ಟು ಮಕ್ಕಳೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲವಷ್ಟೇ?
ಜನಸಂಖ್ಯೆ ಅ ನಿಯಂತ್ರಣಕ್ಕೆ ಬೇಕಿರುವುದು ಅತ್ಯಂತ ಪ್ರಭಾವೀ ಮತ್ತು ಜ ಕ್ರಿಯಾತ್ಮಕ ಅಭಿಯಾನ. ಮಕ್ಕಳ ಸಂಖ್ಯೆ ನಿರ್ಧರಿಸುವುದು ಗಂಡಾದರೆ ಆಗುವ ಅಭಾಸ ಜನಸಂಖ್ಯೆಯ ಹೆಚ್ಚಳ. ಉತ್ತರ ಭಾರತದ ಹಳ್ಳಿಯೊಂದರಲ್ಲಿ ಮಹಿಳೆಯೊಬ್ಬರು ಮಕ್ಕಳ ಸಂಖ್ಯೆ ನಿರ್ಧರಿಸುವುದು ಗಂಡಾದ್ದರಿಂದ ನಾವು ಅಸಹಾಯಕರೆಂದು ಆಂಗ್ಲ ಪತ್ರಿಕೆಯ ವರದಿಗಾರ್ತಿಗೆ ತಿಳಿಸಿದಳು. ಆರೋಗ್ಯ ಮಂತ್ರಿಗಳ ಸೂತ್ರದ ಬಗ್ಗೆ ಕೇಳಿದಾಗ “ಓರ್ವ ಗಂಡು ಮತ್ತು ಚಂಡಮಾರುತ ಮೇಲೆರಗುವ ಮೊದಲು ಮುನ್ಸೂಚನೆಗಳನ್ನೇನೂ ಕೊಡುವುದಿಲ್ಲ” ಎಂದು ಹಾಸ್ಯ ಚಟಾಕಿ ಹಾರಿಸಿದಳು. ನಮ್ಮ ಕಾಲದಲ್ಲಿ ಪ್ರತಿಯೊಬ್ಬರಿಗೂ 13 ಮಕ್ಕಳಿದ್ದು ಈಗ ಕುಟಂಬ ಯೋಜನೆ ಪ್ರಭಾವದಿಂದ ನಾಲ್ಕರಿಂದ ಆರಕ್ಕೆ ಇಳಿದಿದೆ ಎಂದು ವಯಸ್ಸಾದ ಮಹಿಳೆಯೊಬ್ಬರು ಹೇಳಿದರು. ಈ ವರದಿಗಳನ್ನು ನೋಡಿದಾಗ ನಮಗನ್ನಿಸುವುದು ಮಕ್ಕಳ ಸಂಖ್ಯೆ ನಿರ್ಧರಿಸುವುದರಲ್ಲಿ ಗಂಡಿನ ಪಾತ್ರವೂ ಮತ್ತು ಹೆಣ್ಣುಮಕ್ಕಳಲ್ಲಿ ಶಿಕ್ಷಣದ ಕೊರತೆಯೂ ಇರುವುದು.
ಇನ್ನು ಕೆಲವೊಂದು ಸ್ವಾರಸ್ಯಕರವಾದ ಅಂಕಿ ಅಂಶಗಳತ್ತ ದೃಷ್ಟಿ ಹರಿಸೋಣ.
೧. ಭಾರತದಲ್ಲಿ ಜನಸಂಖ್ಯೆ ವಿಪರೀತ ಹೆಚ್ಚುತ್ತಿದೆ.
ತಪ್ಪು. ನಿಜವೆಂದರೆ ೧೯೮೧ ರಿಂದ ಜನಸಂಖ್ಯೆ ಇಳಿಯುತ್ತಿದೆ.
೨. ಜನಸಂಖ್ಯೆ ಅವಿದ್ಯಾವಂತರಲ್ಲೂ ಮತ್ತು ಗ್ರಾಮೀಣರಲ್ಲೂ ಹೆಚ್ಚಳ ಕಾಣುತ್ತಿದೆ.
ಇಲ್ಲ. ಗ್ರಾಮೀಣ ಜನರಲ್ಲೂ ಮತ್ತು ನಗರ ವಾಸಿಗಳಲ್ಲೂ ೭೦ ರ ದಶಕಕ್ಕೆ ಹೋಲಿಸಿದಾಗ ಜನಸಂಖ್ಯೆ ಶೇಕಡಾ ೪೪ ರಷ್ಟು ಇಳಿತ ಕಂಡಿದೆ.
೩. ಜನಸಂಖ್ಯೆ ಆಹಾರ ಉತ್ಪಾದನೆಯನ್ನು ಹಿಂದಕ್ಕೆ ಹಾಕಿದೆ.
ಇಲ್ಲ. ಆಹಾರ ಉತ್ಪಾದನೆ ೧೯೪೭ ರ ನಂತರ ನಾಲ್ಕು ಪಟ್ಟು ಹೆಚ್ಚಿದ್ದು ಅದೇ ಸಮಯ ಜನಸಂಖ್ಯೆ ಮೂರು ಪಟ್ಟು ಹೆಚ್ಚಿದೆ.
೪. ದೊಡ್ಡ ಜನಸಂಖ್ಯೆ ಬಡತನಕ್ಕೆ ಕಾರಣ.
ತಪ್ಪು. ಬಾಂಗ್ಲಾದೇಶ ೧೯೭೫ ರಿಂದ ೧೯೯೮ ರವರೆಗೆ ಜನಸಂಖ್ಯೆಯನ್ನು ಯಶಸ್ವಿಯಾಗಿ ನಿಗ್ರಹಿಸಿದ್ದು ಇನ್ನೂ ಬಡ ರಾಷ್ಟ್ರವಾಗಿಯೇ ಉಳಿದಿದೆ.