UKG ಕಲಿಯುತ್ತಿರುವ ನನ್ನ ಮಗ ಹಿಶಾಮ್ ನನ್ನು ಮಧ್ಯಾಹ್ನ ಶಾಲೆಯಿಂದ ಮನೆಗೆ ಕರೆತಂದೆ. ಮನೆ ತಲುಪಿದ ಸ್ವಲ್ಪ ನಂತರ ಹೆಂಡತಿ ಮಗನ ಸ್ಕೂಲ್ ಬ್ಯಾಗ್ ಎಲ್ಲಿ ಎಂದು ಕೇಳಿದಳು. ಮಗ ತಂದಿದ್ದೇನೆ ಎಂದರೂ ಕಾಣಲಿಲ್ಲ. ನಾನು ಕಾರಿನಲ್ಲಿರಬಹುದೆಂದು ಹೋಗಿ ನೋಡಿದರೆ ಅಲ್ಲೂ ಇಲ್ಲ. ಮರಳಿ ಮತ್ತೊಮ್ಮೆ ವಿಚಾರಿಸಿದಾಗ ಪೆದ್ದನ ಹಾಗೆ ನಟಿಸಿದ ಹಿಶಾಮ್. ಎಂಥಾ ಮರೆಗುಳಿ ನೀನು ಎಂದು ಕೋಪದಿಂದ ಅವನ ಕಿವಿಯನ್ನು ಹಿಂಡಿ ಮತ್ತೊಮ್ಮೆ ಸುಡುಬಿಸಿಲಿನಲ್ಲಿ ಶಾಲೆಯ ಕಡೆ ಹೊರಟೆ. ಮನೆಯಿಂದ ಶಾಲೆ ೨೦ ನಿಮಿಷದ ಡ್ರೈವ್. ಶಾಲೆಯಲ್ಲಿ ವಿಚಾರಿಸಿದಾಗ ಅಲ್ಲೂ ಇಲ್ಲ. ಸಿಕ್ಕರೆ ತೆಗೆದಿಡುತ್ತೇವೆ ಎಂದು ವಾಚ್ ಮ್ಯಾನ್ ಹೇಳಿದ. ಸರಿ ಆಫೀಸ್ ಗೆ ಮರಳಿ ಬಂದು ಮನೆಗೆ ಫೋನ್ ಮಾಡಿ ಹೇಳಿದೆ ಶಾಲೆಯಲ್ಲೂ ಇಲ್ಲ ಬ್ಯಾಗ್ ಎಂದು. ಹೆಂಡತಿ ಮತ್ತೊಂದು ಸಲ ನೋಡುತ್ತೇನೆ ಎಂದಾಗ ನಾನಂದೆ ಅದೇನು ಕಡ್ಲೆ ನಾ ಕಾಣದೇ ಇರೋಕ್ಕೆ, ಶಾಲೆಯಲ್ಲೇ ಇರಬೇಕು ಬಿಡು ಎಂದು. ೨ ನಿಮಿಷದ ನಂತರ ಮನೆಯಿಂದ ಫೋನ್. ಬ್ಯಾಗ್ ಸಿಕ್ತು ಅಂತ. ಸರಿ ನನ್ನ ಲಂಚ್ ಟೈಮ್ ಗೆ ಮನೆಗೆ ಬಂದು ಮಗನಿಗೆ ಸಾರಿ ಎಂದಾಗ ಕಿವಿ ಹಿಂಡಿಸಿ ಕೊಂಡಿದ್ದನ್ನು ಆಗಲೇ ಮರೆತಿದ್ದ ಮಗ ಕೇಳಿದ ಯಾಕಪ್ಪಾ ಸಾರಿ ಎಂದು. ನಡೆದದ್ದೇನೆಂದರೆ ಭಾರತದಿಂದ ನನ್ನ ಸೋದರಿ ಮಕ್ಕ ಸಂದರ್ಶನಕ್ಕೆ ಸೌದಿ ಬಂದಿದ್ದಳು. ಮನೆಗೆ ಬಂದ ನನ್ನ ಮಗನ ಕೈಯಿಂದ ಬ್ಯಾಗ್ ತೆಗೆದು ಅವನ ರೂಮಿನಲ್ಲಿ ಇಟ್ಟ ನಂತರ ಸಂಪೂರ್ಣವಾಗಿ ಮರೆತಿದ್ದಳು. ಎಂಥಾ ಮರೆಗುಳಿ ಇರಬೇಕು. ಅವಳ ಕಡೆಯಿಂದ ಪಾಪ ನನ್ನ ಮಗ ತನ್ನ ಕಿವಿಯನ್ನು ನನ್ನಿಂದ ವೈಂಡ್ ಮಾಡಿಸಿಕೊಂಡ.
Month: ಜೂನ್ 2009
i dont want to grow
i dont want to grow ಎಂದ ನನ್ನ ಅಳಿಯ ಅಂದರೆ ನನ್ನ ತಂಗಿಯ ೫ ವರುಷದ ಮಗ. ಯಾಕಪ್ಪಾ ಯಾಕೆ ಬೆಳೆಯುವುದಿಲ್ಲ ಅಂತೀಯ ಎಂದು ಕೇಳಿದಾಗ ಅವ ಹೇಳಿದ. ಶಾಲೆಯಲ್ಲಿ ಅಧ್ಯಾಪಕರು ಹೇಳಿದರು, when you grow up you get to have girls ಅಂತ. ನನಗೆ ಹುಡ್ಗೀರು ಇಷ್ಟವಿಲ್ಲ ಆದ್ದರಿಂದ ನನಗೆ ಬೆಳೆಯಲು ಇಷ್ಟ ಇಲ್ಲ. ಈ ಅಧ್ಯಾಪಕರುಗಳಿಗೆ ಯಾಕೆ ಬೇಕೋ ಇಷ್ಟು ಚಿಕ್ಕ ವಯಸ್ಸಿನಲ್ಲಿ ಇದನ್ನೆಲ್ಲಾ ಹೇಳಿಕೊಡುವುದು. ಅವನು ಕಲಿಯುವುದು ಜೆಡ್ದಾದ ಬ್ರಿಟಿಷ್ ಶಾಲೆಯಲ್ಲಿ. ಹಾಗಂದ ಮಾತ್ರಕ್ಕೆ ಅವರ ಸಂಸ್ಕೃತಿಯನ್ನು ಎಳೇ ವಯಸ್ಸಿನಲ್ಲೇ ತುಂಬಬೇಕೆ?
ನಾನು ಪ್ರೌಢ ಶಾಲೆಯಲ್ಲಿದ್ದಾಗ ನಡೆದಿದ್ದು. ನಮ್ಮ ಕನ್ನಡ ಲೆಕ್ಚರರ್ ಸ್ವಲ್ಪ ತಮಾಷೆಯವರು. ಒಂದು ದಿನ ಪಾಠ ಮಾಡುತ್ತಾ ಹೇಳಿದರು. ಹೆಣ್ಣಿನ ಬಗ್ಗೆ ಪುರಾಣ ಏನು ಹೇಳುತ್ತೆ ಗೊತ್ತೇನ್ರೋ? ಹೆಣ್ಣಿನ ವರ್ಣನೆ ಹೇಗಿದೆ ಗೊತ್ತಾ, ಸ್ವಲ್ಪ ಕೇಳ್ರಿ ಎಂದು ಶುರು ಮಾಡಿದರು.
“ಕ್ಷಮಯಾ ಧರಿತ್ರೀ
ಜ್ಞಾನೇನು ಸರಸ್ವತೀ
ರೂಪೇಣು ಲಕ್ಷ್ಮೀ,
ಶಯನೇಶು ವೇಶ್ಯಾ”
ಹೀಗಿರಬೇಕಂತೆ ಹೆಣ್ಣು.
ಆಹಾ ವೇಶ್ಯಾ ಎನ್ನುತ್ತಾ ನಮ್ಮೆಡೆ ತುಂಟ ಕಣ್ಣುಗಳಿಂದ ನೋಡಿ ನಕ್ಕರು.
Choose to save
Choose to save, it will save you in the long run ಅಂತ ಹೇಳುತ್ತಾರೆ. ಆದರೆ ವಾಸ್ತವವಾಗಿ ಎಷ್ಟು ಜನ ಈ ನುಡಿಯನ್ನು ಅರಿತು ಮಳೆಗಾಲಕ್ಕೊಂದಿಷ್ಟು ಎಂದು ಉಳಿತಾಯ ಮಾಡುತ್ತಾರೆ? ಉಳಿತಾಯ ಮತ್ತು ವ್ಯಾಯಾಮ ಇವೆರಡೂ ಒಂದೇ ಗುಂಪಿನವು. ವ್ಯಾಯಾಮ ಮಾಡಬೇಕು ಅನ್ನೋ ಇಚ್ಛೆ ಒಂದಿದ್ದರೆ ಸಾಲದು ಟ್ರ್ಯಾಕ್ ಅಥವಾ ಜಿಮ್ ದಾರಿ ಹಿಡಿಯಲೇ ಬೇಕು. ನಾಳೆ ಮಾಡೋಣ, ಮತ್ತೊಂದು ದಿನ ಮಾಡೋಣ ಎಂದು ದಿನ ದೂಡುವಂತೆಯೇ ಉಳಿತಾಯದ ಬಗ್ಗೆಯೂ ನಮ್ಮ ನೀತಿ. ಮುಂದಿನ ಸಂಬಳದಲ್ಲಿ ಒಂದಿಷ್ಟು ತೆಗೆದಿಡೋಣ ಅಥವಾ ಇನ್ನೆಂದಾದರೂ ಉಳಿಸೋಣ ಎಂದು ಮುಂದಕ್ಕೆ ಹಾಕುತ್ತಿರುತ್ತೇವೆ. ಚಿಕ್ಕಾಸಾದರೂ ಸರಿ ನಮ್ಮದಲ್ಲ ಎಂದು ತೆಗೆದಿಟ್ಟರೆ ಅವು ಕೆಲಸಕ್ಕೆ ಬರುತ್ತವೆ. ಹಣಕಾಸು ಪಂಡಿತರ ಪ್ರಕಾರ ವರ್ಷದಲ್ಲಿ ಕನಿಷ್ಠ ೩ ತಿಂಗಳ ಸಂಬಳವಾದರೂ ಉಳಿತಾಯವಾಗಿ ಉಳಿಯಬೇಕು. ಇದು ದೊಡ್ಡ ಸಾಹಸವೇ ಸರಿ. ವಿಶೇಷವಾಗಿ ಎಂದೂ ವ್ಯಾಯಾಮ ಮಾಡಿರದವನಿಗೆ ಒಮ್ಮೆಲೇ ನೂರು ಭಸ್ಕಿ ಹೊಡಿ ಎಂದು ಹೇಳಿದಂತೆ ವರುಷದ ಮೂರು ತಿಂಗಳ ಹಣವನ್ನು ಮುಟ್ಟದಂತೆ ಕಾಪಾಡುವುದು. ಹೊಸ ವರ್ಷದ ನಿರ್ಣಯಗಳು ಗೋತ ಹೊಡೆದಂತೆ ಉಳಿತಾಯದ ಐಡಿಯಾಗಳೂ ಹೊಡೆದವು ಗೋತಾ. ಆದರೆ ಸ್ವಲ್ಪ ಗಟ್ಟಿ ಮನಸ್ಸು ಮಾಡಿ ಶುರು ಮಾಡಿದರೆ ಖಂಡಿತ ಸಾಧ್ಯ ಉಳಿತಾಯ. ಒಮ್ಮೆಲೇ ದೊಡ್ಡ ಮೊತ್ತವನ್ನು ತೆಗೆದಿಡಲು ಹೋಗಬಾರದು. start small. long journey starts with one step ಅನ್ನೋ ಹಾಗೆ ಸ್ವಲ್ಪ ಸೊಲ್ಪವೇ ಉಳಿಸಿಕೊಂಡು ಹೋದರೆ ಮುಂದೊಂದು ದಿನ ಆ ಮೊತ್ತ ಯಾವುದಾದರೂ ಉಪಯೋಗಕ್ಕೆ ಬರುತ್ತದೆ. ಇನ್ನು ಕೆಲವರು ಸಣ್ಣ ಪ್ರಮಾಣದ ಭೂಮಿ ಅಥವಾ ಸೈಟ್ ಖರೀದಿ ಮಾಡಿ ಇಡುತ್ತಾರೆ. ಸಂಬಳ ಸಿಕ್ಕಾಗ ಒಂದು ಕವರಿನಲ್ಲಿ ನಮ್ಮದಲ್ಲ ಎಂದು ತೆಗೆದಿಟ್ಟರೂ ಒಳ್ಳೆಯದೇ. ಶಾಪಿಂಗ್ ವೇಳೆಯಲ್ಲೂ ನಮಗೆ ಬೇಡದ ವಸ್ತುಗಳನ್ನು ಖರೀದಿ ಮಾಡಬಾರದು ಅಥವಾ ಆ ವಸ್ತು ಬೇಕೇ ಬೇಕು ಎಂದಾಗ ಅದರಲ್ಲೇ ವಿವಿಧ ಬ್ರಾಂಡ್ ಗಳಿಗೆ ಬೇರೆ ಬೇರೆ ದರಗಳಿರುತ್ತವೆ, ಅದನ್ನು ನೋಡಿ ಬ್ರಾಂಡ್ ಮೋಹಕ್ಕೆ ಬೀಳದೆ ಕೊಂಡು ಅಲ್ಲಿಯೂ ಉಳಿಸುವುದನ್ನು ಮಾಡಬಹುದು.
ಬಯ್ ಒನ್, ಗೆಟ್ ಒನ್ ಫ್ರೀ
ಇದು ಕೊಳ್ಳುವ ವಸ್ತುಗಳಿಗೆ ಸೀಮಿತವೋ, ಮದುವೆಗೂ ಅನ್ವಯಿಸಬಹುದೇ ಇದು? ಒಂದನ್ನು ಮದುವೆಯಾದರೆ ಮತ್ತೊಂದು ಫ್ರೀ? ಡಿವೋರ್ಸ್ ಆದ ಒಂದು ಮಗುವಿರುವ ತಾಯಿಯನ್ನು ಮದುವೆಯಾದರೆ ಹೇಳುವುದಿದೆ. ಆಕೆಯನ್ನು ಮದುವೆಯಾದರೆ ಮಗು ಫ್ರೀ. ಇದೂ ಒಂಥರಾ ಬಯ್ ಒನ್ ಗೆಟ್ ಒನ್ ಫ್ರೀ ಕಾನ್ಸೆಪ್ಟು. . ಮಾರ್ಕೆಟಿಂಗ್ ಕಂಪೆನಿಗಳು ತಮ್ಮ ಮಾರಾಟವಾಗದೇ ಉಳಿದ ಮಾಲುಗಳನ್ನು ಈ ರೀತಿ ವ್ಯಾಪಾರ ಮಾಡಿ ಮುಗಿಸುತ್ತಾರೆ. ಹಲ್ಲುಜ್ಜುವ ಪೇಸ್ಟ್ ಕಂಪನಿ ಒಂದಿಷ್ಟು ವಿವಿಧ ರುಚಿಯುಳ್ಳ ಪೇಸ್ಟ್ ಗಳನ್ನು ಮಾರುಕಟ್ಟೆಗೆ ತರುತ್ತದೆ. ಅವುಗಳಲ್ಲಿ ಒಂದೆರಡು ರುಚಿಯ ಪೇಸ್ಟ್ ಗಳು ಗೋತಾ ಹೊಡೆದಾಗ ಬರುತ್ತವೆ ಬಯ್ ಒನ್ ಗೆಟ್ ಒನ್ ಫ್ರೀ.
ತಮಾಷೆ ಬಿಟ್ಹಾಕಿ ನಿಜ ಜೀವನಕ್ಕೆ ಬರೋಣ. ನನಗೆ ಪರಿಚಯದ ಒಬ್ಬರೊಂದಿಗೆ ನಡೆದ ಘಟನೆ. ಅಪ್ಪ ಜಮೀನ್ದಾರ. ೬೦ ವಯಸ್ಸಿನ ಈ ವ್ಯಕ್ತಿ ತನ್ನ ಹೆಂಡತಿ ತೀರಿಕೊಂಡಾಗ ಮತ್ತೊಂದು ಮದುವೆ ಆಗುತ್ತಾರೆ. ಯೌವನಕ್ಕೆ ಮಾತ್ರವಲ್ಲ, ಮುಪ್ಪಿಗೂ ಬೇಕಲ್ಲ ಜೊತೆ. ಸರಿ ಮೊದಲ ಹೆಂಡತಿಯ ಮಕ್ಕಳು ಆಸ್ತಿಯಲ್ಲಿ ಸಹಜವಾಗಿಯೇ ಪಾಲು ಕೇಳುತ್ತಾರೆ. ಅದಕ್ಕೆ ಅಪ್ಪ ಕೊಟ್ಟ ಉತ್ತರ ಏನು ಗೊತ್ತಾ? ಓಕೆ, ನಾನು ರೆಡಿ ಆದರೆ ಒಂದು ಷರತ್ತು. ಒಂದೆಕರೆ ಜಮೀನು ಹಣ ಕೊಟ್ಟು ಕೊಂಡರೆ ಮತ್ತೊಂದ್ ಎಕರೆ ಜಮೀನು ಫ್ರೀ. ವಾಹ್, ಈ ಅಪ್ಪ wharton business school ನಲ್ಲಿ ಕಲಿತಿದ್ದಾ? ಕೆಲ ಸ್ಥಿತಿವಂತ ಹುಡಗರು ಹಣ ಕೊಟ್ಟು ಕೊಂಡರು ಜಮೀನನ್ನು. ಆದರೆ ಕೊನೆ ಮಗನ ಸ್ಥಿತಿ ಅಷ್ಟಕ್ಕಷ್ಟೇ. ಅವನಿಗೆ ದಕ್ಕಲಿಲ್ಲ ಪಾಲು ಅಪ್ಪನ ಆಸ್ತಿಯಲ್ಲಿ.
ಹಿಜ್ ಡ
IKEA ವಿಶ್ವ ಪ್ರಸಿದ್ಧ ಗೃಹ ಬಳಕೆಯ ವಸ್ತುಗಳ ದೈತ್ಯ ಸರಣಿ. ಎಲೆಕ್ಟ್ರಾನಿಕ್ಸ್ ಬಿಟ್ಟು ಮನೆಗೆ ಬೇಕಾದ ಪ್ರತಿ ವಸ್ತು ಲಭ್ಯ ಇಲ್ಲಿ. ಇವರ ಷೋ ರೂಂ ಅತಿ ವಿಸ್ತಾರ ಮತ್ತು ಮನೆಯನ್ನು ಯಾವ ರೀತಿ ಸಜ್ಜುಗೊಳಿಸಬೇಕೆಂದು ತೋರಿಸುವ ಮಾಡೆಲ್ ರೂಮ್ಗಳು ಆಯ್ಕೆಗೆ ಸಹಾಯ ಮಾಡುತ್ತವೆ. ಇಲ್ಲಿ ಮಾರಲ್ಪಡುವ ವಸ್ತುಗಳು box packed. ನಾವೇ ಮನೆಗೆ ಒಯ್ದು ಜೋಡಿಸಿಕೊಲ್ಲಬೇಕು. ಇದು ikea ವಿಶೇಷತೆ. ಈ ವ್ಯವಸ್ಥೆ ಮಾರುವವನಿಗೂ ಕೊಳ್ಳುವವನಿಗೂ ಹಣ ಉಳಿತಾಯ ಮಾಡುತ್ತದಂತೆ. ಸ್ವೀಡನ್ ಮೂಲದ ಈ ಸರಣಿ ಮುಂದುವರಿದ ರಾಷ್ಟ್ರಗಳಲ್ಲಿ ಜನಪ್ರಿಯ.
ಜೆಡ್ಡಾ ನಗರದ IKEA ಕೂಡ ಭಾರೀ ಗಾತ್ರದ್ದು. ಕೆಲವೊಮ್ಮೆ ಸಮಯ ಕಳೆಯಲು ಅಲ್ಲಿಗೆ ನಾನು ಹೋಗುವುದುಂಟು. ಸುಲಭವಾಗಿ ೨-೩ ಘಂಟೆ ಕಳೆಯಬಹುದು ಒಮ್ಮೆ ಒಳ ಹೊಕ್ಕರೆ. ಆಯಾಸವೋ, ಹಸಿವೋ ಆದರೆ ಸುಸಜ್ಜಿತ ರೆಸ್ಟುರಾಂಟ್ ಸಹ ಇದೆ. ಒಮ್ಮೆ ಸುತ್ತಾಟ ಮುಗಿಸಿ ಎಲಿವೇಟರ್ ನಿಂದ ಕೆಳಗಿಳಿಯುವಾಗ ದೊಡ್ಡದಾದ ಬೋರ್ಡ್ ಮೇಲೆ “hej da” ಎಂದು ಬರೆದದ್ದು ನೋಡಿ ನನಗೆ ಏನಪ್ಪಾ ಇದು ಹೀಗೆ ಬರೆದಿದ್ದಾರೆ ಎಂದು ನಗು ಬಂತು. ಏನಾದರೂ ತಿಳಿಯದಿದ್ದರೆ wiki ಮತ್ತು google ಎನ್ನುವ ಬೃಹಸ್ಪತಿಗಳು ಇದ್ದಾರಲ್ಲ ಸಹಾಯ ಪಡೆಯಲು. ಅದನ್ನೇ ನಾನು ನಾನು ಮಾಡಿದ್ದು ಮನೆ ತಲುಪಿ. “hej da” ಎಂದರೆ good bye. ಅದರ ಉಚ್ಚಾರ “ಹೇ ದೋರ್” ಎಂದು.
ಸ್ವಾರಸ್ಯಕರ, ಅಲ್ವಾ?
anni-war-sary
ಮನೆಯೊಡತಿ ಮಾತನ್ನು veto ಮಾಡಿದರೆ ಶುರು ಸಂಗೀತ ಸಂಜೆ. ಹರಿಕಥೆಯಾದರೂ ಅನ್ನಿ. ಯಾವುದಕ್ಕೂ ಬಂತು ಪಾತ್ರೆಗಳಿಗೆ ತಾಪತ್ರಯ. ಧಡಲ್, ಭಡಲ್, ದಬರಿಯಿಂದ ಬಾಂಡ್ಲಿ ವರೆಗೆ ಎಲ್ಲವಕ್ಕೂ ಮಂಗಳಾರತಿ. ಮಹಿಳೆಯರಿಗೆ ಕೋಪ ವ್ಯಕ್ತಪಡಿಸಲು ಹಲವಾರು ಮಾರ್ಗಗಳು. ಸೌಟು, ಗ್ಯಾಸ್ ಲೈಟರ್. ನಮಗೋ? ಬಡವನ ಕೋಪ ದವಡೆಗೆ ಮೂಲ, ದನಗಳ ಥರ ಕೋಪವನ್ನು ದವಡೆಗಿಟ್ಟು ಅಗಿಯುತ್ತಾ ಕೂರಬೇಕು. ಕೆಲವೊಮ್ಮೆ ಅಡುಗೆ ಮನೆಗೆ ಕಾಲಿಡುವಾಗ ಪಾತ್ರೆ ಪಗಡಿಗಳು ದೀನವಾಗಿ ನನ್ನನ್ನು ನೋಡಿ ಈಗ ಅದ್ಯಾವ ಹೊಸ scandal ತಂದೆಯಪ್ಪಾ ನಮ್ಮ ಜೀವನ ನರಕ ಮಾಡಲು ಎಂದು ಕರುಣೆಯಿಂದ ನೋಡುತ್ತವೆ. ಗ್ರಾನೈಟ್ ಮೇಲೆ ಕುಟ್ಟಿಸಿ ಕೊಂಡು ಮುಖ ಮೂತಿ ಕಳೆದುಕೊಂಡಿರುವ ಪಾತ್ರೆಗಳ ಹಾಗೆಯೇ bachelorhood ಕಳಕೊಂಡ ಗಂಡಿನ ಬಾಳು. customer is always right, ಆದರೆ ಸಂಸಾರದಲ್ಲಿ ಹೆಂಡತಿಯೇ ರೈಟ್. ಕೆಲವೊಮ್ಮೆ customer is always the loser, ಸಂಸಾರ ರಥದಲ್ಲಿ ಇದರ ಪಟ್ಟ ಗಂಡಿಗೆ. ನಮ್ಮ ಹಣೆಯಲ್ಲಿ ಗೆಲುವನ್ನು ಬರೆಯಲು ಮರೆತ ಗಂಡಸಾದ ಆ ಪರಮಾತ್ಮ. ನಿಲ್ಲಿ, ನಿಲ್ಲಿ. ಒಂದು ಮಾತು ನೆನಪಿಗೆ ಬಂತು. “ಹೆಣ್ಣು ಎಷ್ಟು ಬೇಗ ಮದುವೆ ಆಗುತ್ತಾಳೋ ಅಷ್ಟು ಲಾಭಕರ ಅವಳಿಗೆ, ಗಂಡು ಎಷ್ಟು ತಡ ಮಾಡುತ್ತಾನೋ ಅಷ್ಟು ಲಾಭಕರ ಅವನಿಗೆ”.
ನಿಜಾನಾ?
ಮದುವೆ ಅನ್ನೋ ವಿಶೇಷವೇ ಹೀಗೆ, ಹಳೆ ಗಾದೆಗಳೆಲ್ಲ ನೆನಪಿಗೆ ಬಂದು ಬಿಡುತ್ವೆ.
ಈಗಿನ ಹೊಸ ತಗಾದೆ ಎಂದರೆ wedding anniversary ಮಾಡಬೇಕು. ನಾನು, ಅದು ನಮ್ಮ ಸಂಸ್ಕಾರ ಅಲ್ಲ ಎಂದರೆ ಕುಕ್ಕರ್ ಅನ್ನು ಕೌಂಟರ್ ಟಾಪಿನ ಮೇಲೆ ಕುಕ್ಕಿ ಹೇಳುತ್ತಾಳೆ, ಇಂಗ್ಲಿಷ್ ಹಾಡು ಕೇಳಲು ಸಂಸ್ಕಾರ ಅಡ್ಡ ಬರೋದಿಲ್ಲವಲ್ಲ? facebook ನಲ್ಲಿ ಕಾಲ ಕಳೆಯಲು ಸಂಸ್ಕೃತಿ ತಗಾದೆ ಮಾಡೋದಿಲ್ವಲ್ಲ?
If I lay here, If I just lay here, Would you lie with me, And just forget the world?
ಗುನುಗಿಸುತ್ತಾ follow on ಪಡೆದ ಪೆಚ್ಚು ಮೋರೆಯ ನಾಯಕನಂತೆ ಮೆಲ್ಲನೆ ಅಡುಗೆ ಮನೆಯಿಂದ ಹೊರ ನಡೆಯುತ್ತೇನೆ.
ನಿಮ್ಮಲ್ಲಿ ಒಂದು ಸೀಕ್ರೆಟ್: ನಾನೇನಾದರೂ ಮನಸ್ಸು ಬದಲಾಯಿಸಿ ಅನ್ನಿವೆರ್ಸರಿ ಗೆ ಒಪ್ಪಿದ್ದೇ ಆದರೆ ಅವಳ ಗಿಫ್ಟ್ ಏನು ಗೊತ್ತಾ? ಒಂದು ಸುಂದರ ಹಿಡಿಕೆ ಇರುವ ಮೋಹಕ ಸುತ್ತಿಗೆ. ಹೌದ್ರೀ ಸುತ್ತಿಗೆ. ಕೋಪ ಬಂದಾಗ magistrate ಥರ ಕುಟ್ಟುತ್ತಾ ಕೂರಲಿ.
ನನ್ನ ಮಗ ಹುಟ್ಟಿದ್ದು ಮೊರಾರ್ಜಿ ದೇಸಾಯಿ ಹುಟ್ಟಿದ ದಿನ. ಫೆಬ್ರವರಿ ೨೯, ೨೦೦೪. ಲೀಪ್ ಇಯರ್ ನಲ್ಲಿ (ಅಧಿಕ ವರ್ಷ ) ಹುಟ್ಟಿದ ನನ್ನ ಮಗನ ಹುಟ್ಟು ಹಬ್ಬ ೪ ವರ್ಷಗಳಿಗೊಮ್ಮೆ. ಅದನ್ನೂ ಸಹ ಆಚರಿಸಲಿಲ್ಲ ನಾನು, ಏಕೆಂದರೆ birth ಡೇ ನಮ್ಮ ಸಂಸ್ಕೃತಿಯಲ್ಲ ಎಂದು. ನನ್ನ ಪ್ರೀತಿಯ ocean of pride, river of joy ಆದ ನನ್ನ ಮಗನಿಗೇ ಇಲ್ಲದ ಆಚರಣೆ ಇವಳಿಗ್ಯಾಕೋ ಏನೋ? ಇದೆಲ್ಲಾ ಅವಳಿಗೆ ಬೇಕಿಲ್ಲ. ಈ ಜೂನ್ ೧೧ ಕ್ಕೆ ಮಾಡಲೇಬೇಕು ಅನ್ನಿವೆರ್ಸರಿ.
ನನ್ನ (ಕಾರಾ) ಗೃಹ ವಾಸದ ಅನ್ನಿವೆರ್ಸರಿ.
ಮಹಿಳೆಯರಿಗೆ ತಮ್ಮ ಇನಿಯಂದಿರು ಅವರ ಹುಟ್ಟು ಹಬ್ಬಕ್ಕೆ, anniversary ಮತ್ತೇನೇನು ವಿಶೇಷ ಸಂದರ್ಭಗಳು ವಕ್ಕರಿಸಿ ಕೊಳ್ಳುತ್ತವೆಯೋ ಅವಕ್ಕೆಲ್ಲ ಕೊಡ ಬೇಕು ಗಿಫ್ಟು, ಆದರೆ ಗಂಡಿಗೆ?. ಅದೇ ಹಳೆ ಬಾಟಾ ಕಂಪೆನಿಯ ಸವೆದ ಎಕ್ಕಡಗಳೋ? ಇದ್ಯಾವ ನ್ಯಾಯವೋ ಏನೋ?
ಒಟ್ಟಿನಲ್ಲಿ ಮದುವೆಯೆಂಬ ಮೋಜಿನ ಮಜಾ ಉಡಾಯಿಸುತ್ತಿರುವುದು ಮಹಿಳೆಯರೇ, ನಾವಲ್ಲ.
ನಮ್ಮ balance ನಲ್ಲಿ ಮದುಮಗ, ಅಳಿಯಂದಿರು, ಅಂತ ಒಂದಿಷ್ಟು ಅತ್ತೆ ಮನೆಯಲ್ಲಿ ಉಪಚಾರ ಸಿಗುತ್ತದಲ್ಲ ಅದೇ ಬಾಕಿ. ಅಷ್ಟಕ್ಕೆ ಮತ್ತು ಅಲ್ಲಿಗೇ ಸೀಮಿತ ನಮ್ಮ ಮೋಜು.
ಗಂಡಿನ ಮೋಜು.
ಮೇಣದ ಲೋಕ
ಮೇಣ ಎಂದ ಕೂಡಲೇ ನಾವು ಹಿಡಿ ಹಿಡಿ ಶಾಪ ಹಾಕುವ ಪವರ್ ಔಟೇಜ್ ನೆನಪಿಗೆ ಬಂದು ಬಿಡುತ್ತದೆ. ಮೇಣದ ಉಪಯೋಗ ಹಲವೆಡೆಗಳಲ್ಲಿ ವಿವಿಧ ಉದ್ದೇಶಗಳಿಗಾಗಿ ಬಳಸುತ್ತೇವೆ. ಈ ಆಧುನಿಕ ಇಲೆಕ್ಟ್ರಾನಿಕ್ ಯುಗದಲ್ಲಿ ಇನ್ನೂ ತನ್ನ ಉಪಯುಕ್ತತೆಯನ್ನು ಬಿಟ್ಟು ಕೊಡದೆ ಸೆಣಸುತ್ತಿರುವ ಹಲವು ವಸ್ತುಗಳಲ್ಲಿ ಬಡ ಮೇಣವೂ ಒಂದು.
ಮೇಡಂ ಟುಸ್ಸೋ ( madam tussaud ) ಮೇಣದ ವಸ್ತು ಸಂಗ್ರಹಾಲಯ ಲಂಡನ್ನಿನ ಪ್ರಮುಖ ಆಕರ್ಷಣೆಗಳಲ್ಲಿ ಒಂದು.
ವಿವಿಧ ಕಾರ್ಯಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿದ ವ್ಯಕ್ತಿಗಳ ಮೇಣದ ಪ್ರತಿಮೆ ಈ ಸಂಗ್ರಹಾಲಯದಲ್ಲಿ. shakespeare ನಿಂದ ಹಿಡಿದು ಶಾರುಕ್ ಖಾನ್ ವರೆಗೆ ಸಾವಿರಾರು ಖ್ಯಾತ ವ್ಯಕ್ತಿಗಳು ಮೇಣದಲ್ಲಿ ಅಮರರು. ಮಹಾತ್ಮ ಗಾಂಧಿ, ಇಂದಿರಾ ಗಾಂಧಿ, ರಾಜೀವ್ ಗಾಂಧಿ, ಬಚನ್, ಐಶ್ವರ್ಯ, ತೆಂಡೂಲ್ಕರ್, ಕಪಿಲ್ ದೇವ್ ಹೀಗೆ ಸಾಗುತ್ತದೆ ಭಾರತದ ಪಟ್ಟಿ. ಅಮೀರ್ ಖಾನ್ ಮಾತ್ರ ತನ್ನನ್ನು ಮೇಣದ ಮಟ್ಟಕ್ಕೆ ಇಳಿಸಿಕೊಳ್ಳುವುದು ತರವಲ್ಲ ಎಂದೋ ಏನೋ ಒಪ್ಪಲಿಲ್ಲ. ಯುದ್ಧಕೋರರಾದ ಹಿಟ್ಲರ್, ಸದ್ದಾಂ ಇಲ್ಲಿ ರಾರಾಜಿತ. ನಮ್ಮ ಆನೆ ಹಂತಕ ವೀರಪ್ಪನ್ ತನ್ನ ವಿಶಿಷ್ಟ ಮೀಸೆಯೊಂದಿಗೆ ಇಲ್ಲದಿರುವುದು ಸ್ವಲ್ಪ ಬೇಸರವೇ.
ಮೇಡಂ ಟುಸ್ಸೋ (1761–1850), ಫ್ರಾನ್ಸ್ ದೇಶದವರಾದ ಈಕೆ ವೈದ್ಯರಾದ ತನ್ನ ತಂದೆಯಿಂದ ಕಲಿತರು ಮೇಣದ ಶಿಲ್ಪಕಲೆ.
ಈ ಸಂಗ್ರಹಾಲಯದಲ್ಲಿರುವ ಮೂರ್ತಿಗಳಲ್ಲಿ ಕಿಡಿಗೇಡಿಗಳಿಗೆ ಪ್ರೀತಿಯ ಪ್ರತಿಮೆ ಅಡಾಲ್ಫ್ ಹಿಟ್ಲರ್ ನದು. ಒಂದೆರಡು ಸಲ ಹಿಟ್ಲರ್ ನ ಮೇಲೆ ಧಾಳಿ ಮಾಡಿ ಅವನ ತಲೆಯನ್ನು ಬೇರ್ಪಡಿಸಿದ್ದರು ಪುಂಡರು. ಅವರ ಆಕ್ರೋಶವೂ ಅರ್ಹ್ತವಾಗುವನ್ಥದ್ದೆ. ವಿನಾಕಾರಣ ೬೦ ಲಕ್ಷ ಯಹೂದಿಯರನ್ನು ಸಾವಿನ ಕೂಪಕ್ಕೆ ನೂಕಿದವನಲ್ಲವೇ ಹಿಟ್ಲರ್?
ನನ್ನ ತಂಗಿಯ ಮಗ ೯ ವರ್ಷದ ಅಯ್ಮನ್ ಲಂಡನ್ ಪ್ಯಾರಿಸ್ ಪ್ರವಾಸದ ವೇಳೆ ಈ ಸಂಗ್ರಹಾಲಯಕ್ಕೆ ಭೇಟಿ ನೀಡಿದಾಗ ತೆಗೆದ ಚಿತ್ರ ಲೇಖನದೊಂದಿಗಿರುವುದು. ಅವನ ಅಮ್ಮ ಫೋಟೋ ಕ್ಲಿಕ್ಕಿಸುವಾಗ ಹೇಳಿಸಿಕೊಳ್ಳದೆಯೇ ತನಗೆ ತಾನೇ ಕೈ ಮುಗಿದು ನಿಂತು ಬಿಟ್ಟ ನಮ್ಮನ್ನು ಪರಂಗಿ ದಾಸ್ಯದಿಂದ ಮುಕ್ತಿ ಗೊಳಿಸಿದ ಮಹಾ ಚೇತನದೆದುರು.
ಇನ್ನೂ ಬೇರೆ ಬೇರೆ ಮಹಾಮಹಿಮರೂ ಇದ್ದರು ಕರಗದ ಮೇಣವಾಗಿ. ಇವರಾರಿಗೂ ಕೊಡದ ಮರ್ಯಾದೆ ಗಾಂಧೀಜಿಗೆ ಕೊಟ್ಟಿದ್ದು ನನಗೆ ತಿಳಿಯಲಿಲ್ಲ. ಏಕೆಂದರೆ ಅವನು ಕಲಿಯುತ್ತಿರುವುದು British ಶಾಲೆಯಲ್ಲಿ, ಚರ್ಚಿಲ್, ಥ್ಯಾಚರ್, ರಾಣಿ ವಿಕ್ಟೋರಿಯಾ, ಲೇಡಿ ಡಯಾನ ಇವರ ಬಗ್ಗೆಯೇ ಕೇಳಿದ್ದ ಇವನಿಗೆ ಭಾರತದ ನಾಯಕರ ಪರಿಚಯ ಕಡಿಮೆ. ವಿಚಾರಿಸಿದಾಗ ನನಗೆ ಹಾಗೆ ಕೈ ಮುಗಿಯಬೇಕೆಂದು ತೋಚಿತು ಮುಗಿದೆ ಅಷ್ಟೇ ಎಂದು ಭುಜ ಹಾರಿಸಿ ಹೇಳಿದ.
ಯಾರಲ್ಲೂ ಗೌರವ ಮನೋಭಾವ ಹುಟ್ಟಿಸುವಂಥ ವ್ಯಕ್ತಿತ್ವ ಗಾಂಧಿ ತಾತನದು. ಅದು ಅವರನ್ನು ಕೊಂದ ದುಷ್ಟನಿಗೆ ಹೊಳೆಯದೆ ಹೋಯಿತಲ್ಲ ಎಂದು ಕನಿಕರ ತೋರಿತು.
ಬೆಡ್ ಟೈಮ್ ಸ್ಟೋರಿ
ನೀವು ಹೇಳುವಿರಾ ಮಕ್ಕಳಿಗೆ ಮಲಗುವಾಗಿನ ಕತೆಗಳನ್ನು? ಸ್ವಲ್ಪ ಕಷ್ಟದ ಕೆಲಸವಾದರೂ ಅದರಲ್ಲಿ ಮಕ್ಕಳಿಗೆ ಸಂತಸವನ್ನಲ್ಲದೆ ನಮಗೂ ಮೋಜನ್ನು ನೀಡುತ್ತದೆ. ಮಾತ್ರವಲ್ಲ ಕೆಲವೊಮ್ಮೆ ನಮ್ಮ ಬಾಲ್ಯದ ಕೆಲವು ಘಟನೆಗಳನ್ನೂ ನೆನಪಿಗೆ ಬರುವಂತೆ ಮಾಡುತ್ತದೆ. ಮಕ್ಕಳಿಗೆ ಕತೆ ಓದುವುದರಿಂದ ಮಕ್ಕಳೊಂದಿಗಿನ ನಮ್ಮ ಬಾಂಧವ್ಯವನ್ನು ದೃಢ ವಾಗಿಸುತ್ತದೆ. ಒಮ್ಮೆ ಜೆದ್ದಾ ದ ರಸ್ತೆಯಲ್ಲಿ ಹಾದು ಹೋಗುವಾಗ ಮಕ್ಕಳಿಗೆ ಓದುವುದನ್ನು ಉತ್ತೇಜಿಸುವ ಬಿಲ್ ಬೋರ್ಡ್ ಕಾಣ ಸಿಕ್ಕಿತು. ಅಲ್ಲಾವುದ್ದೀನ್ ಮಾಂತ್ರಿಕ ದೀಪ ಹಿಡಿದ ಚಿತ್ರದೊಂದಿಗೆ ದಿನದಲ್ಲಿ ಕನಿಷ್ಠ ೧೫ ನಿಮಿಷ ವಾದರೂ ಓದಬೇಕೆನ್ನುವ ಕಿವಿಮಾತನ್ನೂ ಸೇರಿಸಿದ್ದರು.
ನನ್ನ ೫ ವರ್ಷದ ಮಗ ಹಿಶಾಮ್ ನಿಗೆ ದಿನವೂ ನಾನು ಕತೆ ಹೇಳಬೇಕು ಅವನು ಮಲಗುವಾಗ. ಹಿಶಾಮನಿಗೆ ಅವನ ಒಂದೂವರೆ ವರ್ಷದ ಇಸ್ರಾ ಳನ್ನು ಕಂಡರೆ ಆಗದು. ಒಂಥರಾ ಅಸೂಯೆ. ಎಷ್ಟೇ ಬುಧ್ಧಿ ಹೇಳಿದರೂ ಕೇಳುವುದಿಲ್ಲ. ಅವಳು ಕಣ್ಣಿಗೆ ಬಿದ್ದರೆ ಕಟ ಕಟ ಹಲ್ಲು ಮಸೆಯುತ್ತಾನೆ. ಸರಿ ಇದನ್ನೇ ಆಧಾರ ವಾಗಿಟ್ಟುಕೊಂಡು ಒಂದು ಕತೆ ಹೆಣೆದೆ.
” ಒಂದೂರಿನಲ್ಲಿ ಒಬ್ಬ ಹುಡ್ಗನಿದ್ದ, ಅವನಿಗೆ ತನ್ನ ತಂಗಿಯನ್ನು ಕಂಡರೆ ಇಷ್ಟವಿಲ್ಲ. ಯಾವಗಲೂ ಹಲ್ಲು ಕಡಿಯುತ್ತಾನೆ ಅವಳನ್ನು ನೋಡಿ. ಒಂದು ದಿನ ಅವನ ಬಾಯಿಯ ಹಲ್ಲುಗಳು ಸಭೆ ನಡೆಸಿ ಈ ಹುಡುಗ ನಮ್ಮನ್ನು ಕಡಿದು ಕಡಿದೂ ನೋವು ಕೊಡುತ್ತಾನೆ, ಅವನು ಮಲಗಿದಾಗ ನಾವೆಲ್ಲಾ ಎದ್ದು ಓಡಿ ಹೋಗೋಣ ಎಂದು. ಸರಿ ಒಂದು ರಾತ್ರಿ ಹಲ್ಲುಗಳೆಲ್ಲ ಸೇರಿ ಓಡಿ ಬಾತ್ರೂಮಿನ ಕಿಟಕಿಯ ಮೇಲೆ ಅಡಗಿ ಕೂರುತ್ತವೆ. ಹುಡುಗ ಬೆಳಗಾದಾಗ ಹಲ್ಲುಜ್ಜಲು ಹೋಗುತ್ತಾನೆ, ಪೇಸ್ಟ್ ಹಚ್ಚಿ ಕನ್ನಡಿಯ ಮುಂದೆ ನಿಂತಾಗ ಹಲ್ಲುಗಳು ಗೋಚರಿಸುವುದಿಲ್ಲ. ಅಯ್ಯೋ, ನನ್ನ ಹಲ್ಲುಗಳೆಲ್ಲಿ ಎಂದು ಓಡಿ ತನ್ನ ತಾಯಿಗೆ ಹೇಳುತ್ತಾನೆ. ತಾಯಿಯ ಕಣ್ಣಿಗೂ ಕಾಣುವುದಿಲ್ಲ. ಶಾಲೆಗೆ ಹೊತ್ತಾಯಿತೆಂದು ಹುಡುಗ ಶಾಲೆಗೆ ಓಡುತ್ತಾನೆ. ಅಲ್ಲಿ ಅವನ ಗೆಳೆಯರ ಅವನ ಹಲ್ಲಿಲ್ಲದ ಬಾಯಿ ನೋಡಿ ತಮಾಷೆ ಮಾಡಿ ನಗುತ್ತಾರೆ. ಶಿಕ್ಷಕರು ವಿಷಯವೇನೆಂದು ಕೇಳಿದಾಗ ಹುಡುಗ ನಡೆದದ್ದನ್ನು ಹೇಳುತ್ತಾನೆ. ಕೊನೆಗೆ ಅವನ ಶಿಕ್ಷಕರು ಅವನ ಮನೆಗೆ ಬಂದು ನೋಡಿದಾಗ ಹಲ್ಲುಗಳು ಬಾತ್ ರೂಮಿನ ಕಿಟಕಿಯ ಮೇಲೆ ಸಾಲಾಗಿ ಕುಳಿತಿರುತ್ತವೆ. ವಿಚಾರಿಸಿದಾಗ ಹಲ್ಲುಗಳು ನಡೆದದ್ದನ್ನು ಹೇಳುತ್ತವೆ. ಶಿಕ್ಷಕರು ಹಲ್ಲುಗಳ ಮನವೊಲಿಸಿ ಅವನ ಬಾಯಿಗೆ ಮರಳುವಂತೆ ಮಾಡುತ್ತಾರೆ. ಮತ್ತು ಹುಡುಗನಿಗೆ ತಾಕೀತು ಮಾಡುತ್ತಾರೆ ಇನ್ನೊಮ್ಮೆ ನಿನ್ನ ತಂಗಿಯನ್ನಾಗಲಿ ನೋಡಿ ಹಲ್ಲು ಮಸೆದರೆ ಹಲ್ಲುಗಳು ಎಂದಿಗೂ ಮರಳುವುದಿಲ್ಲ ಜೋಕೆ ಎಂದು ಹೇಳಿ ಹೋಗುತ್ತಾರೆ”.
ಈ ಕತೆ ಕೇಳಿದ ನಂತರ ನನ್ನ ಮಗ ಹಲ್ಲು ಮಸೆಯುವುದನ್ನು ಸ್ವಲ್ಪ ದಿನದ ಮಟ್ಟಿಗೆ ನಿಲ್ಲಿಸಿದ.
he has a crush on a girl
he has a crush on a girl
bakugan ಹೊಸ ಕಾರ್ಟೂನ್ ಚಿತ್ರ. ಮಕ್ಕಳ ಕಲ್ಪನಾ ಶಕ್ತಿಯನ್ನು ಹಿಡಿದಿಟ್ಟ ಈ ಚಿತ್ರ ಈಗ latest craze. ಈ ಚಿತ್ರದ ಬಗ್ಗೆ ಮಾತನಾಡುತ್ತಾ ನನ್ನ ತಂಗಿಯ ೭ ವರ್ಷದ ಮಗ ತನ್ನ ೯ ಅಣ್ಣನಿಗೆ ಮೇಲಿನ ಮಾತುಗಳನ್ನು ಹೇಳಿದ. he has a crush on a girl. ಈ ಚಿತ್ರದ ನಾಯಕನಿಗೆ ಪ್ರೇಮಾಂಕುರ ಆಗಿದೆಯಂತೆ. ಈಗಿನ ಮಕ್ಕಳ ಮಾತಿನ ಧಾಟಿ ಇದು. ಈಗಲೇ ಲವ್ವು ಗಿವ್ವು. ನಾವು ಚಿಕ್ಕವರಿದ್ದಾಗ ಈ ಮಾತುಗಳನ್ನು ಆಡುವುದಿರಲಿ, ಕೇಳಿಯೂ ಇರಲಿಲ್ಲ.
ಕಾಲ ಬದಲಾಯಿತು, ಅದರೊಂದಿಗೆ ಮಾತೂ ಕೂಡಾ.
ಬುಧ್ಧನ ಪಲಾಯಾನ
ಬುಧ್ಧನ ಪಲಾಯಾನ
ಬುದ್ಧಂ ಶರಣಂ ಗಚ್ಚಾಮಿ, ಧರ್ಮಂ ಶರಣಂ ಗಚ್ಚಾಮಿ ಎನ್ನುತ್ತಾ ಇರು ಎಂದ ಓರ್ವ ತರುಣನಿಗೆ ಡಿಸ್ಕೋ ಬ್ಯಾಂಡ್ ಪಸಂದ್ ಆಗಿ ಆಶ್ರಮ ಬಿಟ್ಟು ಓಡಿದ. ದಲೈ ಲಾಮ ತಮ್ಮ ಅವತಾರ ಎಂದು ನೇಮಿಸಿದ್ದ ಒಸೇಲ್ ಹಿತಾ ತೋರ್ರೆಸ್ ಗೆ ತೋಚಿದ್ದು ತಾನು ಸುಳ್ಳಿನ ಬದುಕನ್ನು ಬದುಕುತ್ತಿದ್ದೇನೆಂದು. “It was like living a lie,”
೫ ತಿಂಗಳ ಮಗುವಾಗಿದ್ದಾಗ ಈತನನ್ನು ಆಶ್ರಮದಲ್ಲಿ ನೋಡಿದ ಒಬ್ಬರು ಇವನಲ್ಲಿ ದಲೈ ಲಾಮರ ಅವತಾರವನ್ನು ಕಂಡರು. ೧೯೮೬ ರಲ್ಲಿ ಈತನಿಗೆ ೧೪ ತಿಂಗಳು ವಯಸ್ಸಾದಾಗ ಅವನ ಪಾಲಕರು ಧರ್ಮಶಾಲೆಗೆ ದಲೈ ಲಾಮರಲ್ಲಿ ಕರೆತಂದರು ಮತ್ತು ೯ ಮಕ್ಕಳಲ್ಲಿ ಲಾಮಾರ ಅವತಾರವಾಗಲು ಇವನನ್ನು ಚುನಾಯಿಸಲಾಯಿತು.
ನನ್ನನ್ನು ನನ್ನ ಪಾಲಕರಿಂದ ದೂರ ಮಾಡಿ ಮಧ್ಯ ಯುಗದ ಜೀವನಕ್ಕೆ ನನ್ನನ್ನು ತಳ್ಳಿದರು ಎಂದು ದೂರುವ ಈತ ಈ ಜೀವನದಿಂದ ಬಹಳಷ್ಟು ನರಳಿದ್ದೇನೆ ಎಂದು ಹೇಳುತ್ತಾನೆ.
ದೇವರು ಮನುಷ್ಯನನ್ನು ತನ್ನ ಅವತಾರ ಎಂದು ಸೃಷ್ಟಿಸಿ ಅವನಿಗಾಗಿಯೇ ಸಕಲ ವಸ್ತುಗಳನ್ನೂ ಸೃಷ್ಟಿಸಿ ಸುಖಿಸು ಎಂದರೆ ದೇವನ ಅಪ್ಪಣೆಗೆ ವಿರುದ್ಧವಾಗಿ ನಾವು ನಡೆದು ವಿರಕ್ತರಾದರೆ ಇದೇ ಪರಿಸ್ಥಿತಿಯೋ ಏನೋ?