ಲಂಕಾ ದಹನ

twenty20 ವಿಶ್ವಕಪ್ ಸರಣಿಯಲ್ಲಿ ಲಂಕೆಗೆ ಸೋಲು. ಆಡಿದ ಎಲ್ಲ ಪಂದ್ಯಗಳನ್ನೂ ಗೆದ್ದು ಬೀಗುತಿದ್ದ ಲಂಕೆಗೆ ಅಂತಿಮ ಪಂದ್ಯದಲ್ಲಿ ಪಾಕ್ ಪೆಡಂಭೂತ ನುಂಗಿ ಹಾಕಿತು. “ವಾಟರ್ ಲೂ” ಆಗಿ ಪರಿಣಮಿಸಿತು ಲಂಕೆಗೆ Lord’s ಮೈದಾನ. ತನ್ನ ದಾರಿಗೆ ಅಡ್ಡ ನಿಂತ ಒಂದೊಂದೇ ತಂಡಗಳನ್ನು ಮಣಿಸುತ್ತಾ ಬಂದ ಲಂಕಾ ಕಪ್ ತನ್ನದೇ ಎಂದು ಭಾವಿಸಿದ್ದರೆ ತಪ್ಪಿಲ್ಲ. ಆದರೆ ಎಂದಿನಂತೆ ಅನಿಶ್ಚಿತತೆಯೇ ತನ್ನ ಪ್ರಕೃತಿ ಎಂದು ಆಡುವ ಪಾಕಿಸ್ತಾನ ಸರಿಯಾದ ಆಘಾತವನ್ನೇ ಲಂಕೆಗೆ ನೀಡಿತು. ಬೂಂ ಬೂಂ ಎಂದು ವರ್ಣಿಸಲ್ಪಡುವ ಶಾಹಿದ್ ಆಫ್ರಿದಿ ತನ್ನ ನೈಸರ್ಗಿಕ ಆಟಕ್ಕೆ  ಅತ್ಯಂತ ವಿರುದ್ಧವಾಗಿ ಜಾಗರೂಕನಾಗಿ ಆಡಿ ಪಂದ್ಯ ಪಾಕ್ ಕೈ ತಪ್ಪದಂತೆ ನೋಡಿಕೊಂಡಿದ್ದು ವಿಶೇಷ.

ಎಂಟು ವಿಕೆಟುಗಳು, ಎಂಟು ಚೆಂಡುಗಳು ಬಾಕಿ ಇರುವಂತೆ ಪಾಕ್ ವಿಜಯ ಕಹಳೆ ಮೊಳಗಿತು.

ಲಂಕಾ ಆಟಗಾರರ ಮೇಲೆ ಪಾಕ್ ನೆಲದ ಮೇಲೆ ನಡೆದ ಆಕ್ರಮಣದಿಂದ ಪಾಕ್ ಕ್ರಿಕೆಟ್ ತತ್ತರಿಸಿತ್ತು. ಯಾವುದೇ ತಂಡಗಳೂ ಪಾಕಿಗೆ ಹೋಗಲು ತಯಾರಿಲ್ಲ. ಸ್ಥಳೀಯ ಕ್ರಿಕೆಟ್ ಸಹ ಹಲವು ಕಾರಣಗಳಿಗೆ ಸೊರಗಿತ್ತು. ಆಂತರಿಕ ಕ್ಷೋಭೆಗಳಿಂದ ಬಳಲುತ್ತಿದ್ದ ಪಾಕಿಗೆ ಭಯೋತ್ಪಾದಕ ರಾಷ್ಟ್ರ ಎನ್ನುವ ಪಟ್ಟ. ಇಂಥ ಹೆನ್ನೆಲೆಯ ನಡುವೆಯೂ ಪಾಕ್ ಆಟಗಾರರು ಮೋಹಕ ಪ್ರದರ್ಶನ ನೀಡಿ ವಿಶ್ವಕಪ್ ಗೆದ್ದರು. ಈ ಗೆಲುವಿನಿಂದ ಪಾಕಿಸ್ತಾನಕ್ಕೆ ವಿಶ್ವ ಸ್ಥರದಲ್ಲಿ ಒಂದಿಷ್ಟು ಮಾನ. ಪಾಕ್ ಬರೀ ಭಯೋತ್ಪಾದಕರ ಸಂತೆಯಲ್ಲ ಎಂದು ತೋರಬಹುದು ವಿಶ್ವಕ್ಕೆ.

ಸ್ವಾತ್ ಕಣಿವೆಯಲ್ಲಿ ತಾಲಿಬಾನ್ ದ್ರೋಹಿಗಳನ್ನು ಸದೆಬಡಿಯುತ್ತಿರುವ ಪಾಕ್ ಸೈನಿಕರಿಗೆ ಇನ್ನಷ್ಟು ಹುಮ್ಮಸ್ಸು ಬಂದು ಸಂಪೂರ್ಣವಾಗಿ ತಾಲಿಬಾನ್ ಎಂಬ ವಿಷ ಕಳೆಯನ್ನು ಕಿತ್ತು ಹಾಕಲು ಈ ಗೆಲುವು ಸಹಾಯಕವಾಗಬಹುದು. ಹೀಗಾದರೆ ಅದು ಪಾಕಿಗೂ ಒಳ್ಳೆಯದು ನಮಗೂ ಒಳ್ಳೆಯದು.

ನಿಮ್ಮ ಟಿಪ್ಪಣಿ ಬರೆಯಿರಿ