ಅಮೇರಿಕೆಗೆ ತಿಗಣೆ ಕಡಿತ

ಅಮೆರಿಕೆಗೀಗ ತಿಗಣೆ ಕಾಟ ಅಂತೆ. ಅಮೆರಿಕವೇ ಒಂದು ಮಹಾ ತಿಗಣೆ ಎಂದು ಅದನ್ನು ನಿಗ್ರಹಿಸಲು ನಾವು ಯೋಚಿಸುತಿದ್ದರೆ ಬಂತು ಹೊಸ ಪ್ರಾರಬ್ದ.  ಕಳೆದ ೫ ವರ್ಷಗಳಲ್ಲಿ ಶೇಕಡಾ ೭೧ ರಷ್ಟು ವೃದ್ಧಿ ಆಗಿದೆ ಅಂತೆ ಅಮೇರಿಕೆಯಲ್ಲಿ. ಎಲ್ಲಿಂದ ಬಂದವು ಎಂದು ಕೇಳಬೇಡಿ, ಬಹುಶಃ ಅಮೆರಿಕೆಯ ಮಿತ್ರ ಲಾಡೆನ್ ಮಹಾಶಯ ಆಫ್ಘಾನಿಸ್ತಾನದ “ತೋರಬೋರ” ಗವಿಗಳಿಂದ ಕಳಿಸಿರಲಿಕ್ಕೂ ಸಾಕು. you cannot laugh it off, anything can happen in this world, you see?

 ಇದರ ಹಾವಳಿ ತಡೆಯಲು ” ರಾಷ್ಟ್ರೀಯ ತಿಗಣೆ ಶೃಂಗ ಸಭೆ” ಅಮೇರಿಕೆಯಲ್ಲಿ. ತಿಗಣೆಯಿಂದ ಕಚ್ಚಿಸಿಕೊಂಡು ಕೆಂಡಾ ಮಂಡಲವಾಗಿರುವ  ಎಲ್ಲರೂ ಸೇರಿ ಚರ್ಚೆ ನಡೆಸಬಹುದು ತಿಗಣೆ ಹಾವಳಿ ಹೇಗೆ ತಡೆಯುವುದು ಎಂದು. ಸಭೆ ಗಿಭೆ ಮಾಡಿ ಡಾಲರ್ ಕಳೆಯುವುದಕ್ಕಿಂತ ಬಾಂಗ್ಲಾ ದೇಶದಿಂದಲೋ, ಅಥವಾ ನಮ್ಮ ದೇಶದಿಂದಲೋ ಒಂದಿಷ್ಟು ಐಡಿಯಾ ಎರವಲು ಪಡೆಯಬಾರದೆ? ತುಂಬಾ ವರ್ಷಗಳ ಹಿಂದಿನ ಮಾತು. ಒಮ್ಮೆ ಒಂದು ಜಾಹೀರಾತು ನೋಡಿದೆ. ತಿಗಣೆ ಕೊಲ್ಲುವ ಮೆಶಿನ್ ಬಗ್ಗೆ. ಕಂಪೆನಿ ಇರುವುದು ದೆಹಲಿಯಲ್ಲಿ. ೫ ರೂಪಾಯಿ ಸ್ಟಾಂಪ್ ಮಾತ್ರ ಫೀಸು. ಸರಿ ಹೇಗಾದರೂ ತಿಗಣೆ ತೊಲಗಿದರೆ ಸಾಕು ಅಂತ ಹೇಗೋ ೫ ರೂಪಾಯಿ ಹೊಂದಿಸಿ ಕಳಿಸಿದ್ದಾಯಿತು. ಬಂತು ಮೆಶಿನ್ ಮನೆಗೆ. ಕಾತುರದಿಂದ ಕವರ್ ತೆರೆದು ನೋಡಿದಾಗ ೨ ಚಿಕ್ಕ ಕಲ್ಲುಗಳು, ಮತ್ತೊಂದು ಕಡ್ಡಿ. ಅದರೊಂದಿಗೆ manual ಬೇರೆ. ಕಡ್ಡಿಯಿಂದ ತಿಗಣೆ ಹಿಡಿದು ಎರಡು ಕಲ್ಲುಗಳ ನಡುವೆ ಅದನ್ನು ಇಟ್ಟು ಜಜ್ಜಬೇಕು. ಎಂಥಾ ಮೋಸ ನೋಡಿ. ಒಂದು ಕಡೆ ೫ ರೂಪಾಯಿ ಹೋದ ದುಃಖ, ಮತ್ತೊಂದೆಡೆ ದೂರದ “ಜಂತರ್ ಮಂತರ್” (ದಿಲ್ಲಿ) ನಲ್ಲಿ ಕೂತು ಚೇಷ್ಟೆ ಮಾಡಿದವನ ಮೇಲೆ ಸಾವಿರ ತಿಗಣೆ ಹರಿಬಿಡುವಷ್ಟು ಕೋಪ.

ಅಮೆರಿಕೆಯ ಈ ತಿಗಣೆ ತಾಪತ್ರಯ ನೋಡಿ ಇರಾನ್, ಉತ್ತರ ಕೊರಿಯಾ, ಅಲ್ಕೈದ, ಲಿಬ್ಯ, ಕ್ಯೂಬಾ, ವೆನೆಜುಯೆಲ ಗಳಿಗೆ ಆನಂದವೋ ಆನಂದ. ನಮ್ಮ ಪಾಲಿಗೆ ದೊಡ್ಡ ತಿಗಣೆಯಾಗಿದ್ದ ಅಮೇರಿಕೆಗೆ ದೇವರು ಕಳಿಸಿದನಲ್ಲಾ ರಕ್ತ ಹೀರುವ ಸರಿಯಾದ ತಿಗಣೆಯನ್ನು ಎಂದು.                  

ಲೋಕಲ್ ಅನೆಸ್ಥೀಸಿಯ (ಮರೆವಳಿಕೆ) ಕೊಟ್ಟು ನಮಗೆ ತೊಂದರೆ ಆಗದಂತೆ ರಕ್ತ ಪಾನ ಮಾಡುವ ತಿಗಣೆಗಳಿಂದ  ಕಚ್ಚಿಸಿಕೊಳ್ಳುವುದೂ ಒಂದು ಮಜಾ.

ಇದೀಗ ಬಂದ ಸುದ್ದಿ: ಉತ್ತರ ಪ್ರದೇಶದ ಲಕ್ನೌ ದಲ್ಲಿ ಶಿಯಾ ಮುಸ್ಲಿಮರನ್ನು ತಿಗಣೆ ಅಂತಲೂ, ಸುನ್ನಿ ಮುಸ್ಲಿಮರನ್ನು ಸೊಳ್ಳೆ ಎಂದೂ ಕರೆಯುತ್ತಾರಂತೆ. ಅಂದ್ರೆ ನಾನು ಸೊಳ್ಳೆ.

ಅಗಲುವ ಮುನ್ನ…

ನೆನಪಿಡಿ: bedbug ಎನ್ನುವುದು ಒಂದು ಪದ. bed bug ಅಲ್ಲ.

 

ನಿಮ್ಮ ಟಿಪ್ಪಣಿ ಬರೆಯಿರಿ