ಗಂಗೂ, ಈ ಬೈಕು ಕಲಿಸಿಕೊಡೋ ನಂಗೂ

telecommunication-tn 

ಈ ಹಾಡನ್ನು ಒಬ್ಬ “ಮೊಬೈಲ್ ಅಪ್ಪ” ಹೆಚ್ಚು ಕಡಿಮೆ ಪೂರ್ತಿ ಕೇಳಿಸಿದ ನನ್ನ ರೈಲು ಪ್ರಯಾಣದ ವೇಳೆ. ಅಕ್ಕ ಪಕ್ಕ ಕುಳಿತಿರುವವರ ಯಾವುದೇ ಪರಿವೆ ಇಲ್ಲದೆ ಎಲ್ಲರೂ ತನ್ನ creation ಮೆಚ್ಚಿ ತಲೆದೂಗುತ್ತಿದ್ದಾರೆನೋ ಅನ್ನೋ ಭಾವದಿಂದ ಆತ ಕೂತಿದ್ದ. ಭದ್ರಾವತಿಯಿಂದ ಬೆಂಗಳೂರು ತಲುಪುವವರೆಗೂ ಎಂಥೆಂಥ ಹಾಡು ಬೇಕು ನಿಮಗೆ. ಎಲ್ಲಾ ಲಭ್ಯ, ಸಹನೆ ಒಂದಿದ್ದರೆ.

 

ಸಂಬಳ ೨ ಸಾವಿರ ಆದರೂ ೧೦ ಸಾವಿರದ ಮೊಬೈಲ್ ಇರುತ್ತೆ ಕೆಲವರ ಬಳಿ. ಮೊಬೈಲ್ ನಷ್ಟು ಸಾಮಾಜಿಕ ನ್ಯಾಯವನ್ನು ಬೇರಾವುದೇ ವ್ಯಕ್ತಿಯೂ, ವ್ಯವಸ್ಥೆಯೂ, ಉಪಕರಣವೂ ನೀಡಿರಲಾರದು. ಭಿಕ್ಷುಕರ ಕೈಯಲ್ಲೂ ಮೊಬೈಲ್. ನಾನಿರುವ ಜೆದ್ದಾಹ್ದಲ್ಲಿ ಒಂದು ತಮಾಷೆ ಕೇಳಿ.  ಸೌದಿಗಳು (ಅರಬರು) ಬಾಂಗ್ಲಾದೇಶದ ರಸ್ತೆ ಗುಡಿಸುವ ಕೆಲಸಗಾರರಿಗೆ, ಮತ್ತು ಇತರ ನಾಡಿನವರಿಗೆ ದಾನ ಕೊಡುವ ಪದ್ಧತಿ ಇದೆ. ಹೀಗೆ ಒಮ್ಮೆ ಒಬ್ಬ ಅರಬ್ ರಸ್ತೆ ಬದಿ ನಿಂತಿದ್ದ ಬಂಗ್ಲದೆಶದವನನ್ನು ಕರೆದು ಹಣ ಕೊಡಲು ಹೋದಾಗ ಆ ಬಂಗಾಳಿಗೆ ಒಂದು ಕರೆ ಬಂತು. ಜೇಬಿನಿಂದ ಹೊರಗೆ ಬಂತು ಹೊಳೆಯುವ N 90 ಮೊಬೈಲು. ಇದನ್ನು ನೋಡಿದ ಸೌದಿ ಹೇಳಿದ ನನ್ನ ಹತ್ತಿರ ಇನ್ನೂ ಓಬೀರಾಯನ ಕಾಲದ ಮೊಬೈಲ್ ಇರೋದು, ನಿನಗೇಕೆ ಭಕ್ಷೀಸು ಎಂದು ಹೋಗಿಬಿಟ್ಟ.

 

ಹೊಸ technology ಜೊತೆ ಒಂದಿಷ್ಟು ಸೋಶಿಯಲ್ ರೆಸ್ಪೋನಿಸ್ಬಿಲಿಟಿ ಸಹ ಬರಬೇಕು.

ಪ್ರಪ್ರಥಮವಾಗಿ ವಾಹನ ಚಲಾವಣೆ ವೇಳೆ ದಯಮಾಡಿ ಮೊಬೈಲ್ ಉಪಯೋಗಿಸಬೇಡಿ. ಮೊನ್ನೆ ಅಮೆರಿಕಲ್ಲಿ ಒಬ್ಬಳು ಗಾಡಿ ಕಾರು ಚಲಾಯಿಸುತ್ತಾ ಮೆಸೇಜ್ ಮಾಡುತ್ತಿದ್ದಾಗ ನಿಂತ ವಾಹನಗಳ ಮೇಲೆ ಕಾರು ಚಲಾಯಿಸಿ ಒಬ್ಬ ವ್ಯಕ್ತಿಯನ್ನು ಕೊಂದಳು.

 

ಒಮ್ಮೆ ಸೌದಿ ಏರ್ಲೈನ್ಸ್ ನಲ್ಲಿ ಜೆದ್ದಾ ದಿಂದ ದಮ್ಮಾಂ ಹೋಗುವ ವೇಳೆ ವಿಮಾನ ಆರೋಹಣ ಆದ ನಂತರವೂ ಒಬ್ಬ ಅರಬ್ ತನ್ನ ಮೊಬೈಲ್ ಮೂಲಕ ಮಾತನಾಡುತ್ತಿದ್ದ. ಪರಿಚಾರಕರು ಬಂದು ಮನವಿ ಮಾಡಿಕೊಂಡರೂ ಅವನು ಹೇಳಿದ್ದು, ಇದೆಲ್ಲ ಸುಳ್ಳು, ಮೊಬೈಲ್ ಉಪಯೋಗಿಸಿಬಿಟ್ಟರೆ ವಿಮಾನ ಬಿದ್ದು ಹೋಗಲ್ಲ ಅಂತ. ದಮ್ಮಾಂ ತಲುಪಿದ ಕೂಡಲೇ ಆತನನ್ನು ಪೋಲೀಸರ ಕಸ್ಟಡಿಗೆ ಕೊಡಲಾಯಿತು. ಬೇಕಿತ್ತೆ ಇವನಿಗೆ ಈ ತೊಳಲಾಟ? 

 

ಮೊಬೈಲ್ ರಿಂಗ್ ಆದ ಕೂಡಲೇ ಅದನ್ನು ಸೈಲೆಂಟ್ ಮಾಡಿ ಉತ್ತರಿಸಿದರೆ ಎಷ್ಟು ಚೆನ್ನು. ಅವಳ (ನಿನ್ಗೂವಿನ) ಬೈಕಿನ ಮೇಲಿನ ಮೋಹ (ದ್ವಂದ್ವಾರ್ಥದ ಅಸಹ್ಯ ಹುಟ್ಟಿಸೋ ಪೋಲಿ ಹಾಡು)  ನನಗೇಕೆ ಕೇಳಿಸಬೇಕು?

 ಮೊಬೈಲ್ ನಲ್ಲಿ ಜೋರು ಜೋರಾಗಿ ಮಾತನಾಡೋದು. ಇವನ ಹೊಸ ಮೊಬೈಲ್ ನ ಬೆಲೆ ಅಥವಾ ಭತ್ತದ ಧಾರಣೆ ಬಗ್ಗೆ, ಗರ್ಲ್ ಫ್ರೆಂಡ್ ಬಗ್ಗೆ ಬೋಗಿಯಲ್ಲಿರುವವರಿಗೆಲ್ಲಾ ಕೇಳಿಸುವ ಅವಶ್ಯಕತೆ ಇಲ್ಲ. ಮೊಬೈಲ್ ನ volume ಕಡಿಮೆ ಇರಲಿ. 

ಆಸ್ಪತ್ರೆ ಆವರಣದಲ್ಲೂ, ಜನ ನೆಮ್ಮದಿಯಾಗಿ ಊಟ ಮಾಡುವ ರೆಸ್ಟುರಾಂಟ್ ಗಳಲ್ಲೂ ಮೊಬೈಲ್ ಉಪಯೋಗ ಕನಿಷ್ಟವಾಗಿರಲಿ.

ಸಭೆ ಸಮಾರಂಭಗಳಲ್ಲಿ, ಮದುವೆ ಮನೆಗಳಂಥ  ಸ್ಥಳಗಳಲ್ಲಿ ಮೊಬೈಲ್ ಆಪ್ ಮಾಡಿದರೆ ತುಂಬಾ ಒಳ್ಳೇದು.

ಆರಾಧನಾಲಯಗಳಲ್ಲಿ ಮೊಬೈಲ್ ಉಪಯೋಗ ಬೇಡ.

ಕೊನೆಗೆ ಮೊಬೈಲ್ ಗೂ ಮೊದಲು ಪ್ರಪಂಚ ಇತ್ತು ಅನ್ನುವುದು ನೆನಪಿರಲಿ.

ಎಲ್ಲರ ಕೈಯಲ್ಲೂ ಮೊಬೈಲ್ ನೋಡಿ ನನ್ನಾಕೆಯೂ ನನಗೂ ಬೇಕು ಎಂದು ಬೆನ್ನು ಬಿದ್ದಾಗ “ಇದೇನು  ಶೋಕಿ ಬಂತೆ ನಿಂಗೂ” ಎಂದು ಹೇಳಿ ಕೊಡಿಸಿದೆ.

 

ನಿಮ್ಮ ಟಿಪ್ಪಣಿ ಬರೆಯಿರಿ