ಒಂದು ರಾತ್ರಿ ಸದ್ದಾಂ ಹುಸೇನನಿಗೆ ಕನಸು. ಪಕ್ಕದ ಕುವೈತ್ ಎಂಬ ಪುಟ್ಟ ರಾಜ್ಯ ತನ್ನ ೧೯ ನೆ ಪ್ರಾಂತ್ಯ ಅಂತ. ಸರಿ ಬೆಳಿಗ್ಗೆದ್ದು ತನ್ನ ಸೈನಿಕರಿಗೆ ಆಜ್ಞೆ ಕೊಟ್ಟ, ಬುತ್ತಿ ಕಟ್ಟಿಕೊಂಡು ಕುವೈತ್ಗೆ ಹೊರಡಿ, ಒಂದೆರಡು ದಿನಗಳಲ್ಲಿ ಬರುವಿರಂತೆ ಮರಳಿ ಎಂದು. ಅದು ಆಗಸ್ಟ್ ೨, ೧೯೯೦. ನಾನು ಆಗತಾನೆ ಗ್ರಹಚಾರಕ್ಕೆ ಹೊಸದಾಗಿ ಒಂಟೆ ಮೇಯಿಸಲೆಂದು ಸೌದಿ ಅರೇಬಿಯಕ್ಕೆ ಬಂದಿದ್ದು. ನಂತರದ ಘಟನೆಯೆಲ್ಲ ತಮಗೆ ತಿಳಿದದ್ದೇ. ಹತ್ತಾರು ರಾಷ್ಟ್ರಗಳು ಸೇರಿ ರೌಡಿಯನ್ನು ತದುಕುವಂತೆ ಇರಾಕನ್ನು ತದುಕಿ ಕುವೈತಿನಿಂದ ಹೊರ ಹಾಕಿದ್ದು.
ದಹರಾನ್ ಎನ್ನುವ ಸ್ಥಳದಲ್ಲಿ ನನಗೆ ಕೆಲಸ. ಕುವೈತ್ ಮತ್ತು ಇರಾಕಿಗೆ ಸಮೀಪ. ಮಿಲಿಟರಿ ಆಸ್ಪತ್ರೆಯೊಂದರ cafeteria ದಲ್ಲಿ cashier ಆಗಿದ್ದೆ. ೨೫೦ ಅಮೆರಿಕನ್ ಸೈನಿಕರು ಸೇರಿದಂತೆ ಒಟ್ಟು ೧೦೦೦ ಕ್ಕೂ ಹೆಚ್ಚು ಜನ ಬರುತ್ತಿದ್ದರು. ಕನ್ನಡಿಗರು ಇಲ್ಲ ಅನ್ನುವಷ್ಟು ವಿರಳ. ನನಗೋ ಕನ್ನಡ ಮಾತನಾಡಲು ಜನ ಸಿಗದೇ ತಳಮಳ. ಯಾರೋ ಹೇಳಿದರು ಕರ್ನಾಟಕದ ಒಬ್ಬ ಡಾಕ್ಟರ್ ಇದ್ದಾರೆ, ಬ್ರಿಟಿಷ್ ಪೌರ ಅಂತ. ಆದರೆ ಅವರು ಕನ್ನಡದಲ್ಲಿ ಮಾತನಾಡಲೊಲ್ಲರು. ಅವಮಾನವೋ, ಪ್ರತಿಷ್ಟೆಗೆ ಚ್ಯುತಿ ಬರಬಹುದು ಎಂದೋ ಏನೋ. ಒಂದು ದಿನ ನನ್ನ ಬಳಿ ತಮ್ಮ tray ತೆಗೆದುಕೊಂಡು ಬಂದರು ಚಿಕೆನ್ ಊಟದೊಂದಿಗೆ. ನಾನು cash register ನಲ್ಲಿ ಎಂಟರ್ ಮಾಡುತ್ತಿದ್ದೆ. ಆಗ ಅವರು ಕೇಳಿದರು ಚಿಕನ್ಗೆ ಎಷ್ಟು ಎಂದು ಇಂಗ್ಲೀಷಿನಲ್ಲಿ. ನಾನು 6 riyals ಎಂದೆ. ಕೂಡಲೇ ಆತ “ಆರೆಂಟ್ಲೇ ನಲವತ್ತೆಂಟು” ಎಂದು ( ಒಂದು ರಿಯಾಲಿಗೆ ಆಗ ೮ ರೂಪಾಯಿ) ಕನ್ನಡದಲ್ಲಿ ಗುಣಿಸಿ ಹಣ ಕೊಟ್ಟರು. ನಾನು ಮನಸಿನಲ್ಲೇ ಹಾಗೆ ಬಾರಣ್ಣ ದಾರಿಗೆ ಎಂದು ಹಣ ತೆಗೆದುಕೊಂಡೆ. ಅಂದರೆ ಯಾರು ಎಷ್ಟೇ ಶೋಕಿ ಹೊಡೆದರೂ ಆಂತರ್ಯದ ಭಾಷೆ ಅನ್ನೋದು ತನ್ನ ಬಣ್ಣವನ್ನು ತೋರಿಸದೇ ಬಿಡೋಲ್ಲ. ಅದರಲ್ಲೂ ಮಗ್ಗಿಯಂತೂ ಸ್ವಭಾಷೆಯಲ್ಲಿ ಕಲಿತಿದ್ದರೆ ನೀವು ಸ್ವರ್ಗಲೋಕಕ್ಕೆ ಹೋದರೂ ಬಿಡದು ತನ್ನತನವನ್ನು. ನೀವು ಅಮೆರಿಕನ್ನಾದರೂ ಸರಿ, ಬ್ರಿಟಿಷ್ ಆದರೂ ಸರಿ ಇಲ್ಲಾ, ಮೊಜಾಂಬಿಕ್ನವನಾದರೂ ಸರಿ.
…..ಕನ್ನಡವೆನಲು ಕುಣಿದಾಡುವುದೆನ್ನೆದೆ….
ಸೂಪರ್! ಬೀರಬಲ್ಲನ ಕತೆಯ ಹಾಗಿತ್ತು.
ಯಾರ್ಲಾ ಅದು ಅವನವ್ವನ್….. ಅಂದಂಗೆ! 🙂