ಸೌದಿ ಅರೇಬಿಯಾದ ವಾಣಿಜ್ಯ ಕೇಂದ್ರ ಜೆಡ್ಡಾ. ಕೆಂಪು ಸಮುದ್ರದ ತೀರದ ಮೇಲೆ ಕಂಗೊಳಿಸುವ ಈ ಮಹಾ ನಗರಕ್ಕೆ ” ಕೆಂಪು ಸಮುದ್ರದ ವಧು ” ಎಂದೂ ಕರೆಯುತ್ತಾರೆ. ಇಲ್ಲಿನ ನಿವಾಸಿಗಳ ಫೇವರೆಟ್ ಪಾಸ್ ಟೈಮ್ ಅಂದ್ರೆ ಸಮುದ್ರದ ತೀರದಮೇಲೆ ಬಾರ್ಬೀಕ್ಯು ಮಾಡಿ ತಿಂದು ಉರುಳಾಡುವುದು. ಹತ್ತು ಹಲವು ಝಗಝಗಿಸುವ ಮಾಲುಗಳಿದ್ದರೂ ಜನ ಸೋಲುವುದು ಕೆಂಪು ಸಮುದ್ರಕ್ಕೇ.
ಸಾಧಾರಣ ಸಮುದ್ರದ ಹಾಗೆ ಅಲೆಗಳ ಆರ್ಭಟ ಈ ಸಮುದ್ರಕ್ಕಿಲ್ಲ ಹಾಗೂ ಒಮ್ಮೆಗೇ ನೋಡಿದಾಗ ತೋರುವುದು ದೊಡ್ಡ ನದಿಯ ಹಾಗೆ. ಸಂಜೆ ಐದಕ್ಕೆ ಬೆಳ್ಳಿ ಬಣ್ಣದ ಸೂರ್ಯ ಬರು ಬರುತ್ತಾ ಕಿತ್ತಳೆ ಹಣ್ಣಾಗಿ ಸಮುದ್ರಕ್ಕೆ ಜಾರುವ ದೃಶ್ಯ ಸುಂದರ.