ಇಂದು ಇರಾಕಿನ ಮೇಲಿನ ಅಮೆರಿಕೆಯ ಧಾಳಿ ಮತ್ತು ಆಕ್ರಮಣಕ್ಕೆ ಆರು ವರ್ಷ. ಯಾವುದೇ ಕಾರಣವಿಲ್ಲದೆ ಸದ್ದಾಂ ಹುಸ್ಸೇನ್ ಮಾರಕ ಅಸ್ತ್ರಗಳನ್ನು ಶೇಖರಿಸಿದ್ದಾನೆ ಎಂದು ಸುಳ್ಳು ಪುರಾವೆಗಳೊಂದಿಗೆ ಅಮೇರಿಕ ಮತ್ತು ಇಂಗ್ಲೆಂಡ್ ಇರಾಕಿನ ಮೇಲೆ ಧಾಳಿ ಮಾಡಿದವು. weapons of mass destruction ಇದೆ ಎಂದು ಹೇಳಿದ ಅಮೇರಿಕ ವಿಶ್ವಸಂಸ್ಥೆಗೆ ಮತ್ತು ವಿಶ್ವಕ್ಕೆ ನೀಡಿದ ಸಬೂತು “words of mass deception”. ಸೆಪ್ಟೆಂಬರ್ ೧೧, ೨೦೦೧ರ ಅಮೆರಿಕೆಯ ನ್ಯೂಯಾರ್ಕ್ ಮತ್ತು ವಾಷಿಂಗ್ಟನ್ ಮೇಲಿನ ಧಾಳಿಯ ನಂತರ ಬೆಚ್ಚಿಬಿದ್ದು ಬುಧ್ಧಿಯ ಸ್ತಿಮಿತತೆ ಕಳೆದುಕೊಂಡ ಅಮೇರಿಕ ಬಿನ್ ಲಾಡೆನ್ ಆಫ್ಘಾನಿಸ್ತಾನದ ಗುಡ್ಡಗಳಲ್ಲಿ ಅವಿತಿರಬಹುದೆಂದು ಸಾರಾಸಗಟು ಬಾಂಬುಗಳನ್ನು ಸುರಿಸಿತು. ತೋರಬೋರ ಪರ್ವತ ಶ್ರೇಣಿಯ ಗುಹೆಗಳಲ್ಲಿ ಅಡಗಿರುವ ಲಾಡೆನ್ ನನ್ನು ಹೊಗೆ ಹಾಕಿ ಹೊರತೆಗೆದು ತರುತ್ತೇನೆ ಎಂದು ಅಮೆರಿಕನ್ನರನ್ನು ನಂಬಿಸಿದ ಬುಷ್ ಆ ಕಾರ್ಯದಲ್ಲಿ ಸಫಲನಾಗಲಿಲ್ಲ. ಬದಲಿಗೆ ಮದುವೆ ದಿಬ್ಬಣಗಳ ಮೇಲೆ, ಶಾಲೆಗಳ ಮೇಲೆ, ಆಸ್ಪತ್ರೆಗಳ ಮೇಲೆ ಹೀಗೆ ಸಿಕ್ಕ ಸಿಕ್ಕಲ್ಲಿ ಬಾಂಬು ಹಾಕಿ ಸಾವಿರಾರು ಜನರನ್ನು ಬಲಿತೆಗೆದುಕೊಂಡ. ತನ್ನ ದ್ರಿಷ್ಟಿಯನ್ನು ಆಫ್ಘಾನಿಸ್ತಾನದಿಂದ ಇರಾಕಿನೆಡೆಗೆ ಹರಿಸಿದ ಬುಷ್ ತನ್ನ ತಂದೆ ಬುಷ್ ಸೀನಿಯರ್ ಗಾದ ಸೋಲಿನ ಸೇಡು ತೀರಿಸಲು ತೀರ್ಮಾನಿಸಿದ. ಬುಷ್ ಸೀನಿಯರ್ ಸೋಲು ಹೇಗಾಯಿತು?
ಇರಾಕಿನ ಅಧ್ಯಕ್ಷ ಸದ್ದಾಂ ಹುಸೇನ್ ತೈಲ ಸಂಪನ್ನ ಕುವೈತ್ ರಾಷ್ಟ್ರ ಇರಾಕಿನ ೧೯ ನೆ ಪ್ರಾಂತ್ಯ ಎಂದು ಘೋಷಿಸಿ ೧೯೯೦ ಆಗಸ್ಟ್ ತಿಂಗಳಿನಲ್ಲಿ ತನ್ನ ಸೈನ್ಯವನ್ನು ಪುಟ್ಟ ರಾಷ್ಟ್ರ ಕುವೈತ್ ನೊಳಕ್ಕೆ ನುಗ್ಗಿಸಿ ರಂಪ ಎಬ್ಬಿಸಿದ. ಈ ಕ್ರಮದಿಂದ ದಿಗಿಲೆದ್ದ ಅರಬ್ ರಾಷ್ಟ್ರಗಳು ವಿಶೇಷವಾಗಿ ಸೌದಿ ಅರೇಬಿಯಾ ಅಮೆರಿಕನ್ನರ ಸಹಾಯ ಯಾಚಿಸಿದವು. ಸದ್ದಾಮನ ಆಕ್ರಮಣಕಾರಿ ಮನೋಭಾವ ಅರಿತಿದ್ದ ಅರಬರಿಗೆ ಸದ್ದಾಂ ಮುಂದುವರೆದು ಸೌದಿ ಮತ್ತು UAE ಗಳನ್ನೂ ಕಬಳಿಸಬಹುದು ಎಂದು ಭಯ ಉಂಟಾಯಿತು. ಅತ್ತ ಅಮೆರಿಕೆಗೂ ಹೇಗಾದರೂ ಮಧ್ಯ ಪ್ರಾಚ್ಯದಲ್ಲಿ ಒಂದು ಸಾಹಸಕ್ಕೆ ಕೈ ಹಾಕ್ಬೇಕು ಅನ್ನೋ ಕೈಕದಿತ ಶುರುವಾಗಿತ್ತು. ಇದಕ್ಕೆ ಸದ್ದಾಂ ಅನ್ನೋ ಐಲು ದೊರೆ ಅವಕಾಶ ಮಾಡಿ ಕೊಟ್ಟ.