valentines day ಆಗಲೀ mothers day, fathers day, sister-in-laws day, dogs day ಆಗಲೀ ಇವುಗಳನ್ನು ವಿದೇಶಿ ಸಂಸ್ಕೃತಿ ಎಂದು ಹೀಗಳೆಯುವುದು ಬೇಡ. ನಮ್ಮ ಸಂಸ್ಕೃತಿ ನಮಗೆ ಹಿರಿದು, ಅವರದು ಅವರಿಗೆ ಹಿರಿದು. ವರ್ಷದ ೩೬೫ ದಿನಗಳನ್ನೂ ಒಂದಲ್ಲ ಒಂದು ಹೆಸರನ್ನಿಟ್ಟುಕೊಂಡು ಆಚರಿಸಿ ಸಂಭ್ರಮ ಪಡುವ ಪಾಶ್ಚಾತ್ಯರು ವಾಣಿಜ್ಯ ಕಂಪೆನಿಗಳ ಹುನ್ನಾರಕ್ಕೆ ಬಿದ್ದು ಚಟ ಅಂಟಿಸಿ ಕೊಂಡಿರುವುದು ನಿಜ. ಗ್ರೀಟಿಂಗ್ ಕಾರ್ಡ್,ಮೇಣ ಮತ್ತು ಪುಷ್ಪ ಕಂಪೆನಿಗಳ ಮಾರ್ಕೆಟಿಂಗ್ ತಂತ್ರಕ್ಕೆ ತಮ್ಮನ್ನು ಮಾರಿಕೊಂಡು ಕುಣಿಯುವ ಯುವಜನತೆಗೆ ನಮ್ಮ ಸಂಸ್ಕೃತಿ ಪರಿಚಯ ಮಾಡಿ ಕೊಡಬೇಕಾದ್ದು ಮುಖ್ಯ. ಇಂಗ್ಲಿಷ್ ಕಲಿತು, ಮಮ್ಮಿ ಡ್ಯಾಡಿ ಎಂದು ಬಡಬಡಿಸುತ್ತಾ, ಆಂಗ್ಲ ಸಾಹಿತ್ಯದ ಗೀಳು ಅಂಟಿಸಿ ಕೊಂಡಿರುವ ನಮ್ಮ ಯುವಜನತೆ ಅಮೆರಿಕನ್ ಲೈಫ್ ಸ್ಟೈಲ್ ಗೆ ಮಾರು ಹೋಗಿದ್ದು ದುರಂತ. ಭಾಷೆ ಸಂಸ್ಕೃತಿಯನ್ನು ಬೆಸೆಯುವ ಸಂವಹನ. ಇಂಗ್ಲಿಷ್ ಭಾಷೆಯೇ ಬದುಕಾದಾಗ ಇಂಥ ಅನಿಷ್ಟಗಳು ಒಕ್ಕರಿಸಿಕೊಳ್ಳುವುದು ಸಹಜವೆ. ನಮ್ಮ ಮಕ್ಕಳಿಗೆ ಮೊದಲು ನಮ್ಮ ಮಾತೃ ಭಾಷೆಯನ್ನೂ, ನಮ್ಮ ಸಂಸ್ಕೃತಿಯ ಹಿರಿಮೆಯನ್ನೂ ಚಿಕ್ಕಂದಿನಿಂದಲೇ ಹೇಳಿಕೊಟ್ಟು ಬೆಳೆಸಿದರೆ ಈ ರೀತಿಯ ಚರ್ಚೆಗಳಲ್ಲಿ ಹಿರಿಯರು ಕಾಲ ವ್ಯಯಿಸುವ ಅವಸ್ಥೆ ಬರುವುದಿಲ್ಲ.
ಮಕ್ಕಳು ಎಲ್ಲಿಗೆ ಹೋಗುತ್ತಾರೆ, ಏನು ಮಾಡುತ್ತಾರೆ ಎಂದು ನಿಗಾ ಇಟ್ಟು ಇಂಥ ಕಾಲ, ಕಾಸು ಹರಣ ಮಾಡುವ ನಿರರ್ಥಕ ‘days’ ಗಳಿಗೆ ಅವರು ಮಾರುಹೋಗದಂತೆ ನೋಡಿಕೊಳ್ಳಬೇಕು. ತಂದೆ ತಾಯಂದಿರ ಒಪ್ಪಿಗೆಯಿಂದ ಯುವಜನರು ಹೋಗುವುದಾದರೆ ನಮ್ಮ “ನೈತಿಕ ಪೋಲಿಸ್‘ ತಮ್ಮ ಗಬ್ಬು ಮೂಗು ತೂರಿಸಿ ರಂಪ ಮಾಡುವುದು ಸಲ್ಲದು.
ಅತ್ಯುನ್ನತ ನೀತಿಗಳನ್ನು ಮೌಲ್ಯಗಳನ್ನು ನನ್ನ ಜೀವನದಲ್ಲಿ ಅಳವಡಿಸಿಕೊಂಡು ಸಾತ್ವಿಕನಾಗಿ ಸಂಭಾವಿತನಾಗಿ ಬದುಕಲು ಅನುವು ಮಾಡಿಕೊಟ್ಟಿದ್ದು ನನ್ನ ಮದರಸ ಶಿಕ್ಷಣ. (ಮದರಸ ಶಿಕ್ಷಣದ ಬಗ್ಗೆ ಹಿಂದೂ ಮತಾಂಧರ ಕಪೋಲಕಲ್ಪಿತ ವಿಚಾರಗಳು ನರಕ ಸೇರಲಿ) ನನ್ನ ಗೆಳೆಯರು ಹೆಂಡ ಹೆಣ್ಣು ಎಂದು ದಿಕ್ಕಿಲ್ಲದೆ ನಡೆದಾಗ ನನ್ನ ಕಾಲುಗಳು ನನ್ನನ್ನು ನಡೆಸಿದ್ದು ಶಿಷ್ಟಾಚಾರದ ಕಡೆಗೆ. ಇದೇ ರೀತಿಯ ಧಾರ್ಮಿಕ ಬೋಧನೆ ನೀಡುವ, ನಮ್ಮ ಸಂಸ್ಕೃತಿಯನ್ನು ಕೊಂಡಾಡುವ ಒಂದು ವ್ಯವಸ್ಥೆಯನ್ನು ಆದುನಿಕ (?) ಸಮಾಜ ಕಂಡುಕೊಳ್ಳದಿದ್ದರೆ valentines day ಮಾತ್ರ ಅಲ್ಲ, ಇನೂ ಹತ್ತು ಹಲವು ಅನಿಷ್ಟ ಚೇಷ್ಟೆಗಳು ನಮ್ಮನ್ನು ಬೆಂಬತ್ತಬಹುದು.
“ಬೆಂಗಳೂರಿಗರೆ ನಿಮ್ಮ ಕಚೇರಿ, ಕಾಲೇಜಿನಿಂದ ಹೊರಬನ್ನಿ, ನಿಮ್ಮ ಹಕ್ಕುಗಳಿಗೆ ಬದ್ಧರಾಗಿರಿ ಮತ್ತು ಮೂಲಭೂತವಾದಿಗಳನ್ನು ಕಿತ್ತು ಒಗೆಯಿರಿ.”